ಮಡಿಕೇರಿ ಜ.1 : 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು-2023ರ ಜ.6, 7, 8 ರಂದು ಹಾವೇರಿಯಲ್ಲಿ ನಡೆಯಲಿದೆ.
ಈ ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯ ಸಾಧಕರನ್ನು ಸನ್ಮಾನಿಸುವ, ಸಾಹಿತಿಗಳಿಗೆ ಕವನ ವಾಚನ ಮತ್ತು ವಿಷಯ ಮಂಡನೆಗೆ ಅವಕಾಶ ನೀಡಲಾಗಿದೆ.
ಜ.6 ರಂದು ಸಂಜೆ 4 ಗಂಟೆಗೆ ಜರಗುವ ಕವಿಗೋಷ್ಠಿಯಲ್ಲಿ ಕೊಡಗಿನ ಹಿರಿಯ ಚುಟುಕು ಕವಿ ಹಾ.ತಿ ಜಯಪ್ರಕಾಶ್ ಕವನ ವಾಚನ ಮಾಡಲಿದ್ದಾರೆ.
ಸಂಜೆ 6 ಗಂಟೆಗೆ ನಡೆಯಲಿರುವ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಕೊಡಗಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪುತ್ರ ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರಿಯಪ್ಪ ಅವರಿಗೆ ರಕ್ಷಣಾ ಕ್ಷೇತ್ರದಲ್ಲಿ ದೇಶ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಸನ್ಮಾನ ನಡೆಯಲಿದೆ. ಇದು ಕೊಡಗು ಜಿಲ್ಲೆಗೆ ಮತ್ತು ಕೊಡಗಿನ ರಕ್ಷಣಾ ಕ್ಷೇತ್ರದ ಸೇವೆಗೆ ನೀಡಿದ ಗೌರವವಾಗಿದೆ.
ಜ.7 ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ “ಶಿಕ್ಷಣದಲ್ಲಿ ಕನ್ನಡ ಅಸ್ಮಿತೆ” ಎಂಬ ವಿಚಾರ ಗೋಷ್ಠಿಯಲ್ಲಿ ಕೊಡಗಿನವರಾದ, ಇದೀಗ ಹಂಪಿ ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರಾಧ್ಯಾಪಕರಾದ ಡಾ.ಮಾಧವ ಪೆರಾಜೆ ( ಇವರು ದಿ. ಕೇಶವ ಪೆರಾಜೆ ಅವರ ಸಹೋದರರು) ಅವರು ಆಶಯ ಭಾಷಣ ಮಾಡಲಿದ್ದಾರೆ.
ಕರ್ನಾಟಕ ಭಾಷಾ ವೈವಿಧ್ಯ ಕುರಿತು ನಡೆಯುವ ವಿಚಾರಗೋಷ್ಠಿಯಲ್ಲಿ ಕೊಡವ ಭಾಷಾ ವೈವಿಧ್ಯ ಕುರಿತು ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ. ಕಾವೇರಿ ಎನ್.ಎ. ಉಪನ್ಯಾಸ ನೀಡಲಿದ್ದಾರೆ. ಅದೇ ವೇದಿಕೆಯಲ್ಲಿ ಅರೆ ಭಾಷೆ ವೈವಿಧ್ಯತೆಯ ಕುರಿತು ಜಿಲ್ಲೆಯ ಸಾಹಿತಿ ಸ್ಮಿತಾ ಅಮೃತರಾಜ್ ಉಪನ್ಯಾಸ ನೀಡಲಿದ್ದಾರೆ.
ಜ.8 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕೊಡಗಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ, 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಸಾಹಿತ್ಯ ಸಂಘಟಕ ಟಿ.ಪಿ ರಮೇಶ್ ಅವರನ್ನು ಸನ್ಮಾನಿಸಲಾಗುವುದು.
ವರ್ತಮಾನದಲ್ಲಿ ಮಹಿಳೆ ಗೋಷ್ಠಿಯಲ್ಲಿ ಔದ್ಯೋಗಿಕ ಮಹಿಳೆಯರ ಸಾಧನೆಗಳು ಎಂಬ ವಿಚಾರದ ಕುರಿತು ಜಿಲ್ಲೆಯ ಉದ್ಯಮಿ ಜೇನು ಕೃಷಿ ಮತ್ತು ಮಾರುಕಟ್ಟೆಯಲ್ಲಿ ಅಪ್ರತಿಮ ಸಾಧನೆ ಸಾಧಿಸಿದ ಛಾಯಾ ನಂಜಪ್ಪ ವಿಷಯ ಮಂಡನೆ ಮಾಡಲಿದ್ದಾರೆ.
ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯ ಏಳು ಜನರಿಗೆ ಅವಕಾಶ ದೊರೆತಿದ್ದು, ಇದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂದ ಗೌರವವಾಗಿದೆ.
ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಕಾರ್ಯಕ್ರಮದಲ್ಲಿ ಸ್ವಾಗತ ಜವಾಬ್ದಾರಿ ನಿರ್ವಹಿಸಲಿದ್ದು, ವಿರಾಜಪೇಟೆ ತಾಲೂಕು ಅಧ್ಯಕ್ಷ ಡಿ.ರಾಜೇಶ್ ಪದ್ಮನಾಭ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.
ಜಿಲ್ಲೆಯಿಂದ ನೂರಕ್ಕೂ ಹೆಚ್ಚು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರುಗಳು ಮತ್ತು ಕನ್ನಡ ಅಭಿಮಾನಿಗಳು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ ಮುನೀರ್ ಅಹ್ಮದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.