ಮಡಿಕೇರಿ ಜ.5 : ಜಿ.ಪಂ ಕ್ಷೇತ್ರಗಳನ್ನು ಪುನರ್ ವಿಂಗಡಿಸುವ ಮೂಲಕ ಕೊಡಗು ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ. 29 ಕ್ಷೇತ್ರಗಳನ್ನು 25 ಕ್ಷೇತ್ರಗಳಿಗೆ ಸೀಮಿತಗೊಳಿಸಿರುವುದರಿಂದ ಅನುದಾನದ ಕೊರತೆಯಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಆರೋಪಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಈಗ ಇರುವ 29 ಕ್ಷೇತ್ರಗಳನ್ನು ಉಳಿಸಬೇಕು ಅಥವಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಕ್ಷೇತ್ರಗಳ ಪುನರ್ ವಿಂಗಡಣೆ ವಿರುದ್ಧ ಜ.16 ರಂದು ಜಿಲ್ಲಾ ಕಾಂಗ್ರೆಸ್ ಆಕ್ಷೇಪಣೆ ಸಲ್ಲಿಸಲಿದೆ ಎಂದು ತಿಳಿಸಿದ ಅವರು, ಈ ವಿಚಾರದಲ್ಲಿ ಜಿಲ್ಲೆಯ ಶಾಸಕರುಗಳು ಹಾಗೂ ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕೆಂದು ತಿಳಿಸಿದರು.
ಜಿ.ಪಂ ಕ್ಷೇತ್ರಗಳನ್ನು 25 ಕ್ಕೆ ಇಳಿಕೆ ಮಾಡಿರುವುದು ಮತ್ತು ಗಡಿ ಗುರುತು ವಿಚಿತ್ರ ರೀತಿಯಲ್ಲಿದೆ. 60- 70 ಕಿ.ಮೀ ಕ್ರಮಿಸಬೇಕಾದ ಬಿರುನಾಣಿ- ಬಿಟ್ಟಂಗಾಲಕ್ಕೆ ಸಂಪರ್ಕವೇ ಇಲ್ಲದಿದ್ದರೂ ಜಿ.ಪಂ ಕ್ಷೇತ್ರವನ್ನು ಸೃಷ್ಟಿಸಲಾಗಿದೆ. ಈ ರೀತಿಯ ಅರ್ಥಹೀನ ಕ್ರಮಗಳಿಂದ ಮುಂದೆ ಬರುವ ಜಿ.ಪಂ ಸದಸ್ಯರ ಕಾರ್ಯನಿರ್ವಹಣೆಗೂ ಕಷ್ಟವಾಗಲಿದೆ. ಕ್ಷೇತ್ರ ಕಡಿಮೆಯಾದಂತೆ ಜಿಲ್ಲೆಗೆ ಬರುವ ಅನುದಾನವೂ ಕಡಿಮೆಯಾಗಲಿದ್ದು, ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಲಿದೆ ಎಂದು ಅವರು ಗಮನ ಸೆಳೆದರು.
::: ಆರ್‍ಟಿಸಿ ದುಬಾರಿ :::
ಆರ್‍ಟಿಸಿ ಶುಲ್ಕವನ್ನು 15 ರೂ. ಯಿಂದ 25 ರೂ.ಗೆ ಏರಿಕೆ ಮಾಡಿದ್ದು, ಇದು ರೈತರಿಗೆ ಹೊರೆಯಾಗುತ್ತಿದೆ. ಪ್ರತಿಯೊಂದಕ್ಕೂ ಆರ್‍ಟಿಸಿ ನೀಡಬೇಕಾದ ಅನಿವಾರ್ಯತೆ ಇದ್ದು, 25 ರೂ.ವನ್ನು ಭರಿಸುವುದು ಕಷ್ಟವಾಗುತ್ತಿದೆ. ತಕ್ಷಣ ಈ ದರವನ್ನು ಕಡಿಮೆ ಮಾಡಿ ರೂ.15 ಕ್ಕೆ ಸೀಮಿತಗೊಳಿಸಬೇಕು ಎಂದು ಧರ್ಮಜ ಉತ್ತಪ್ಪ ಇದೇ ಸಂದರ್ಭ ಒತ್ತಾಯಿಸಿದರು.
ಕಂದಾಯ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಕಡತಗಳ ವಿಲೇವಾರಿ ಸುಲಭವಾಗಿ ಆಗುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಚುರುಕಾಗಿದ್ದು, ವಲಯ ಮಟ್ಟದಿಂದಲೇ ಬಲಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
::: ಚುನಾವಣೆ ನಡೆಸಲು ಇಷ್ಟವಿಲ್ಲ :::
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ ಜಿ.ಪಂ ಫಲಿತಾಂಶ ಸಮೀಕ್ಷೆಯ ಪ್ರತಿರೂಪವಾಗಲಿದ್ದು, ಸೋಲಿನ ಆತಂಕವಿರುವ ಸರ್ಕಾರ ಜಿ.ಪಂ ಚುನಾವಣೆ ನಡೆಯಬಾರದು ಎನ್ನುವ ಉದ್ದೇಶದಿಂದಲೇ ಈ ರೀತಿಯ ಅನ್ಯಾಯ ಮಾಡಿದೆ ಎಂದು ಟೀಕಿಸಿದರು.
ಜನಗಣತಿ ಆಧಾರದಲ್ಲಿ ಕ್ಷೇತ್ರಗಳ ಸಂಖ್ಯೆಯನ್ನು ಏರಿಕೆ ಮಾಡಲು ಅವಕಾಶವಿದೆ. ಆದರೆ ಜನಸಂಖ್ಯೆ ಏರಿಕೆಯಾದರೂ ಜಿ.ಪಂ ಕ್ಷೇತ್ರದ ಸಂಖ್ಯೆಯನ್ನು 29 ರಿಂದ 25 ಕ್ಕೆ ಇಳಿಕೆ ಮಾಡಲಾಗಿದೆ. ಗೊಂದಲ ಸೃಷ್ಟಿಸುವ ಮೂಲಕ ಚುನಾವಣೆಯನ್ನು ಮುಂದೂಡುವ ಪ್ರಯತ್ನದಲ್ಲಿ ಸರ್ಕಾರ ತೊಡಗಿದ್ದು, ಇದಕ್ಕಾಗಿ ಕೊಡಗನ್ನು ಬಲಿಪಶು ಮಾಡಲಾಗಿದೆ. ಎರಡನೇ ಪಂಕ್ತಿಯ ನಾಯಕತ್ವವವನ್ನು ಸೃಷ್ಟಿಸುವ ಜಿ.ಪಂ ಒಂದು ಅನುಭವದ ವ್ಯವಸ್ಥೆಯಾಗಿದ್ದು, ಕೊಡಗಿಗೆ ಸಂಬಂಧಿಸಿದಂತೆ ಕಡಿತಗೊಂಡ ನಾಲ್ಕು ಕ್ಷೇತ್ರಗಳಲ್ಲಿ ಉದಯವಾಗಬಹುದಾಗಿದ್ದ ನಾಯಕತ್ವಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಜಿಲ್ಲೆಗೆ ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಶಾಸಕರುಗಳು ಮೌನಕ್ಕೆ ಶರಣಾಗಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದ ಅವರು ಜಿ.ಪಂ ಕ್ಷೇತ್ರಗಳನ್ನು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಅಥವಾ 30- 32 ಕ್ಕೆ ಏರಿಕೆ ಮಾಡಬೇಕೆಂದು ಒತ್ತಾಯಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಮಾತನಾಡಿ ಮೂರು ವಿಧಾನಸಭಾ ಕ್ಷೇತ್ರಗಳು ಎರಡಕ್ಕೆ ಸೀಮಿತವಾಗಿದೆ, ಇದೀಗ ನಾಲ್ಕು ಜಿ.ಪಂ ಕ್ಷೇತ್ರಗಳನ್ನು ಕಳೆದುಕೊಳ್ಳಲಾಗಿದೆ. ಆದರೂ ಶಾಸಕರುಗಳು ಜಿಲ್ಲೆಯ ಬಗ್ಗೆ ಯಾವುದೇ ಆಸಕ್ತಿ ತೋರುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಈಗಿರುವ ಜಿ.ಪಂ ಕ್ಷೇತ್ರಗಳನ್ನೇ ಮುಂದುವರೆಸಬೇಕೆಂದು ಒತ್ತಾಯಿಸಿದರು.
ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಲಭ್ಯವಿಲ್ಲ ಎನ್ನುವುದು ಅಧಿವೇಶನದ ಸಂದರ್ಭ ಖಾತ್ರಿಯಾಗಿದೆ. ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸಾ ಸೌಲಭ್ಯಗಳಿಲ್ಲ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಜಿ.ಪಂ ಮಾಜಿ ಸದಸ್ಯ ಬಾನಂಡ ಪ್ರತ್ಯು ಹಾಗೂ ಪ್ರಮುಖರಾದ ಅಪ್ರೋಜ್ ಉಪಸ್ಥಿತರಿದ್ದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*