ಮಡಿಕೇರಿ ಜ.9 : ಮೂರ್ನಾಡು ಸಮೀಪದ ಮುತ್ತಾರ್‍ಮುಡಿ ಗ್ರಾಮದಲ್ಲಿರುವ ಸಂರಕ್ಷಿತ ಭದ್ರಕಾಳಿ ದೇವರ ಕಾಡಿಗೆ ಅಕ್ರಮ ಪ್ರವೇಶ ಮಾಡಿ 2 ಹೆಣ್ಣು ಕಾಡು ಕುರಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪದಡಿ ಮಡಿಕೇರಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ.
ಕಾಫಿ ಕೆಲಸಕ್ಕಾಗಿ ಮುತ್ತಾರ್‍ಮುಡಿಗೆ ಬಂದಿರುವ ತಮಿಳುನಾಡಿನ ಸೇಲಂ ಜಿಲ್ಲೆ ಅತ್ತೂರು ನಿವಾಸಿಗಳಾದ ಜಯರಾಮ್, ಮಥಾಯಂ, ಅಶೋಕ್ ಹಾಗೂ ಮುತ್ತಾರ್‍ಮುಡಿ ಗ್ರಾಮದ ನಿವಾಸಿ ತಮ್ಮಯ್ಯ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ.
ಶನಿವಾರ ರಾತ್ರಿ ಮಡಿಕೇರಿ ವಲಯಕ್ಕೆ ಸೇರಿದ ಮುತ್ತಾರ್‍ಮುಡಿ ಗ್ರಾಮದ ಭದ್ರಕಾಳಿ ದೇವರ ಕಾಡಿಗೆ ತಂಡವೊಂದು ಬೇಟೆಗೆ ತೆರಳಿರುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಮಡಿಕೇರಿ ವಿಭಾಗದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮೂವರು ಬೇಟೆಗಾರರನ್ನು ಬಂಧಿಸಿದರು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭ ಅಲ್ಲಿನ ನಿವಾಸಿ ತಮ್ಮಯ್ಯ ಎಂಬುವವರ ಬಂದೂಕು ಬಳಸಿ 2 ಹೆಣ್ಣು ಕಾಡುಕುರಿಗಳನ್ನು ಬೇಟೆಯಾಡಿರುವುದಾಗಿ ಮಾಹಿತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕಾಡು ಪ್ರಾಣಿ ಬೇಟೆಗೆ ಬಂದೂಕು ನೀಡಿದ ಆರೋಪದಡಿ ತಮ್ಮಯ್ಯ ಅವರನ್ನು ಭಾನುವಾರ ಬೆಳಗ್ಗೆ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಗಳ ಬಳಿಯಿಂದ ಕೃತ್ಯಕ್ಕೆ ಬಳಸಿದ್ದ ಒಂಟಿ ನಳಿಗೆಯ ಒಂದು ಕೋವಿ ಮತ್ತು 2 ಹೆಣ್ಣು ಕಾಡು ಕುರಿಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ನಾಲ್ವರು ಆರೋಪಿಗಳ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಎಲ್ಲಾ ಆರೋಪಿಗಳನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.













