ಮಡಿಕೇರಿ ಜ.9 : ಕಾರ್ಮಿಕರು ಹಾಗೂ ಕೃಷಿಕರ ಮೂಲಭೂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜ.18 ರಿಂದ 22ರವರೆಗೆ 17ನೇ ಸಿಐಟಿಯು ಅಖಿಲ ಭಾರತ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಸಿಐಟಿಯು ಸಮ್ಮೇಳನದ ಸ್ವಾಗತ ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷ ಪಿ.ಆರ್.ಭರತ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪತ್ತನ್ನು ಸೃಷ್ಟಿಸುವ ಶ್ರಮಿಕ ವರ್ಗವೇ ಸಂಕಷ್ಟಕ್ಕೆ ಸಿಲುಕಿದ್ದು, ಪರಿಹಾರದ ಹಕ್ಕನ್ನು ಚಲಾಯಿಸಬೇಕಾಗಿದೆ ಎಂದರು.
ಅರಮನೆ ಮೈದಾನದಲ್ಲಿ ನಡೆಯುವ ಅಖಿಲ ಭಾರತ ಸಮ್ಮೇಳನದಲ್ಲಿ ದೇಶದ 30 ರಾಜ್ಯಗಳ 2 ಸಾವಿರಕ್ಕೂ ಹೆಚ್ಚಿನ ಪ್ರತಿನಿಧಿಗಳು ಸೇರಿದಂತೆ 40 ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಳ್ಳುವ ಮೂಲಕ, ಕಾರ್ಮಿಕ ವರ್ಗದ ಮೂಲಭೂತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಆಳುವ ಪ್ರಭುತ್ವದ ವಿರುದ್ಧದ ಹೋರಾಟಗಳನ್ನು ನಿರ್ಣಯಿಸಲಿರುವುದಾಗಿ ತಿಳಿಸಿದರು.
::: ಕೊಡಗಿನ ಸಮಸ್ಯೆಗಳ ಪ್ರಸ್ತಾಪ :::
ಕೊಡಗು ಜಿಲ್ಲೆಯ ಮುಖ್ಯ ಬೆಳೆಯಾದ ಕಾಫಿ ಮತ್ತು ಕರಿಮೆಣಸು ಕೃಷಿ ಫಸಲಿಗೆ ಸೂಕ್ತ ಧಾರಣೆ ಇಲ್ಲದೆ ಬೆಳೆಗಾರ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇದರಿಂದ ಜಿಲ್ಲೆಯ ತೋಟಗಳಲ್ಲಿ ಬದುಕು ಕಟ್ಟಿಕೊಂಡಿರುವ ಕಾರ್ಮಿಕ ಸಮೂಹವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರೊಂದಿಗೆ ಕಾಡು ಪ್ರಾಣಿಗಳ ಹಾವಳಿ ಜಿಲ್ಲೆಯ ಬೆಳೆಗಾರರ, ಕಾರ್ಮಿಕರ ಬದುಕನ್ನು ಹೈರಾಣಾಗಿಸಿದೆ. ಈ ವಿಚಾರಗಳು ಸಮ್ಮೇಳನದಲ್ಲಿ ಪ್ರಸ್ತಾಪಿಸಲ್ಪಡಲಿದೆಯೆಂದು ಹೇಳಿದರು.
ಹತ್ತು ಹಲ ಸಮಸ್ಯೆಗಳ ನಡುವೆ ಸಿಲುಕಿರುವ ಕೊಡಗು ಜಿಲ್ಲೆ ಕಸ್ತೂರಿ ರಂಗನ್ ವರದಿಯ ಅನುಷ್ಟಾನದ ಆತಂಕದ ಸುಳಿಯಲ್ಲಿದೆ. ಈ ಗುರುತರ ವಿಚಾರ ಸಮ್ಮೇಳನದಲ್ಲಿ ಚರ್ಚೆಗೆ ಒಳಪಡಲಿದೆಯೆಂದು ಪಿ.ಆರ್. ಭರತ್ ಸ್ಪಷ್ಟಪಡಿಸಿದರು.
::: ಶ್ರೀಮಂತ, ಬಡ ಭಾರತ :::
ಭಾರತ ಸ್ವಾತಂತ್ರ್ಯಾನಂತರ 75 ವರ್ಷಗಳನ್ನು ಪೂರೈಸಿರುವ ಬೆನ್ನಲ್ಲೆ, ಇಡೀ ದೇಶ ಆಡಳಿತಾರೂಢರ ಧೋರಣೆಗಳಿಂದ ಬಡವರ ಮತ್ತು ಶ್ರೀಮಂತರ ಭಾರತವಾಗಿ ಪರಿವರ್ತನೆಯಾಗಿದೆಯೆಂದು ಆತಂಕ ವ್ಯಕಪಡಿಸಿದ ಭರತ್, 1991 ರಲ್ಲಿ ಜಾರಿಗೆ ಬಂದ ಉದಾರೀಕರಣ, ಜಾಗತೀಕರಣಗಳು ಕಳೆದ ಆರೇಳು ವರ್ಷದ ಆಡಳಿತದ ಅವಧಿಯಲ್ಲಿ ಇಮ್ಮಡಿ ವೇಗವನ್ನು ಪಡೆದುಕೊಂಡಿದೆ. ಇದರಿಂದ ದೇಶದ ಸಂಪತ್ತು ಪ್ರಸ್ತುತ ಕೇವಲ ಕೆಲವೇ ಕೆಲವು ಕುಟುಂಬಗಳ ಬಳಿ ಕೇಂದ್ರೀಕೃತವಾಗಿರುವ ಅಪಾಯ ನಮ್ಮೆದುರಿಗಿದೆ. ಸಂಪತ್ತು ಸೃಷ್ಟಿಸುವ ಕಾರ್ಮಿಕ ಸಮೂಹ ಒಪ್ಪೊತ್ತಿನ ಕೂಳಿಗೆ ಹೋರಾಟವನ್ನು ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆಯೆಂದು ಕಳವಳ ವ್ಯಕ್ತಪಡಿಸಿದರು.
ಆಹಾರವನ್ನು ಉತ್ಪಾದಿಸುವ ರೈತಾಪಿ ವರ್ಗ, ತಾನು ಉತ್ಪಾದಿಸುವ ಬೆಳೆಗೆ ಯೋಗ್ಯ ಬೆಲೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಕಾಳಸಂತೆಯ ವ್ಯವಹಾರಗಳು ಹೆಚ್ಚುತ್ತಿದ್ದು, ಆಹಾರ ಪದಾರ್ಥಗಳ ಬೆಲೆಯನ್ನು ಇವು ನಿರ್ಧರಿಸುವ ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ಹೇಳಿದರು.
ಭಾರತ ಅತೀ ಹೆಚ್ಚು ಯುವ ಸಮೂಹವನ್ನು ಹೊಂದಿರುವ ದೇಶವೆನ್ನುವ ಹೆಮ್ಮೆ ಒಂದೆಡೆಯಾದರೆ, ಅದೇ ಮತ್ತೊಂದೆಡೆ ವಿದ್ಯಾವಂತ ಯುವ ಸಮೂಹ ಯೋಗ್ಯ ಕೆಲಸವಿಲ್ಲದೆ ಸಮಾಜ ಘಾತುಕ ಶಕ್ತಿಗಳಾಗಿ ಪರಿವರ್ತನೆಯಾಗುತ್ತಿರುವ ಅಪಾಯವು ನಮ್ಮ ಮುಂದಿದೆ. ವರ್ಷಕ್ಕೆ ಕೋಟಿ ಉದ್ಯೋಗ ಸೃಷ್ಟಿಸುವ ಹೇಳಿಕೆ ನೀಡಿದ ಮಂದಿಯಿಂದ 1 ಲಕ್ಷ ಉದ್ಯೋಗ ಸೃಷ್ಟಿಯು ಸಾಧ್ಯವಾಗುತ್ತಿಲ್ಲವೆಂದು ತೀಕ್ಷ್ಣವಾಗಿ ನುಡಿದು, ರಾಷ್ಟ್ರದ ಅಭಿವೃದ್ಧಿಯ ‘ಬೊಗಳೆ’ಗಳ ನಡುವೆ ಹಸಿವಿನ ಭಾರತ ನಿರ್ಮಾಣವಾಗುತ್ತಿರುವ ಅಪಾಯವಿದೆ. ಇಂತಹ ಮೂಲಭೂತ ಪ್ರಶ್ನೆಗಳೊಂದಿಗೆ ನಡೆಯುವ ಸಮ್ಮೇಳನದಲ್ಲಿ, ದುಡಿಯುವ ವರ್ಗಕ್ಕೆ ನ್ಯಾಯ ಒದಗಿಸುವ ಐಕ್ಯತೆಯ ಹೋರಾಟವನ್ನು ಕಂಡುಕೊಳ್ಳುವ ಪ್ರಯತ್ನ ನಡೆಯಲಿದೆ ಎಂದು ಭರತ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು, ಖಜಾಂಚಿ ಎನ್.ಡಿ.ಕುಟ್ಟಪ್ಪ ಹಾಗೂ ಉಪ ಕಾರ್ಯದರ್ಶಿ ರಾಚಪ್ಪಾಜಿ ಉಪಸ್ಥಿತರಿದ್ದರು.