ಮಡಿಕೇರಿ ಜ.9 : ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರನ್ನಾಗಿ ರತ್ನಾಕರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಷಯ ಪ್ರಸ್ತಾಪಿಸಲಾಗುತ್ತಿದ್ದು, ಇದು ನಿಯಮ ಬಾಹಿರ ಆಯ್ಕೆ ಪ್ರಕ್ರಿಯೆಯಾಗಿದೆ ಎಂದು ಸಂಘದ ಜಿಲ್ಲಾ ಉಪಾಧ್ಯಕ್ಷ ವಿ.ರವೀಂದ್ರ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರಾರು ಸದಸ್ಯರಿರುವ ಸಂಘದಲ್ಲಿ ಜಿಲ್ಲಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಆಯ್ಕೆಗೆ ನಿಯಮಗಳನ್ನು ಪಾಲಿಸಬೇಕಾಗಿದೆ. ಯಾವುದೇ ಕಾರ್ಯಕಾರಿಣಿ ಸಭೆ ನಡೆಸದೆ, ದಿನಾಂಕ ನಿರ್ಧರಿಸದೆ ಮತ್ತು ಯಾವ ಸದಸ್ಯರಿಗೂ ಮಾಹಿತಿ ನೀಡದೆ ಏಕಾಏಕಿ ರೆಸಾರ್ಟ್‍ವೊಂದರಲ್ಲಿ ಕೆಲವೇ ವ್ಯಕ್ತಿಗಳು ಸೇರಿಸಿಕೊಂಡು ಅಧ್ಯಕ್ಷರ ಆಯ್ಕೆ ಮಾಡಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಆರೋಪಿಸಿದರು.
ಕಳೆದ 8 ವರ್ಷಗಳಿಂದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಯಾವುದೇ ಸಭೆ ನಡೆಸದೆ ನಿಷ್ಕ್ರಿಯರಾಗಿದ್ದರು. ಕಾರ್ಯಕಾರಿ ಸಮಿತಿಯಿಂದ ಸಭೆ ಕರೆಯುವಂತೆ ಒತ್ತಡ ಹೇರಿದರೂ ಅಧ್ಯಕ್ಷರು ಇಲ್ಲದ ಕಾರಣ ಹೇಳಿಕೊಂಡು ದಿನದೂಡುತ್ತಿದ್ದಾರೆ. ಆದರೆ ಊಟಕೊಡಿಸುವ ನೆಪದಲ್ಲಿ ಬೆರಳೆಣಿಕೆಯ ಸದಸ್ಯರನ್ನು ಕರೆಸಿ ಸಂಘದ ಪ್ರಧಾನ ಕಾರ್ಯದರ್ಶಿಗೆ ಅಧ್ಯಕ್ಷ ಸ್ಥಾನ ನೀಡಿರುವುದು ಹಾಸ್ಯಾಸ್ಪದ ಮತ್ತು ಕೊಡಗು ಬಂಟರ ಸಂಘದ ಸದಸ್ಯರಿಗೆ ಮಾಡಿದ ಅವಮಾನ. ಇದನ್ನು ಬಂಟರ ಸಂಘದ ಕಾರ್ಯಕಾರಿ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ರವೀಂದ್ರ ರೈ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಂಟರ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರವೀಂದ್ರ ರೈ, ನಿಕಟ ಪೂರ್ವ ಗೌರವಾಧ್ಯಕ್ಷ ಬಿ.ಬಿ.ಐತ್ತಪ್ಪ ರೈ, ಕೋಶಾಧಿಕಾರಿ ಬಿ.ಎನ್.ರತ್ನಾಕರ ರೈ, ಮಡಿಕೇರಿ ತಾಲೂಕು ಅಧ್ಯಕ್ಷ ಬಿ.ಐ.ರಮೇಶ್ ರೈ ಹಾಗೂ ಯುವ ಘಟಕದ ಅಧ್ಯಕ್ಷ ಕೆ.ಶರತ್ ಶೆಟ್ಟಿ ಉಪಸ್ಥಿತರಿದ್ದರು.













