ಮಡಿಕೇರಿ NEWS DESK ಏ.17 : ಕೊಡವ ಹೊಸ ವರ್ಷಾಚರಣೆ ಎಡ್ಮ್ಯಾರ್ ಒಂದ್ ರ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ನರಮೇಧದ ದೇವಟ್ ಪರಂಬು ಸ್ಮಾರಕ ಸ್ಥಳದಲ್ಲಿ ಹಿರಿಯರಿಗೆ ಪುಷ್ಪ ನಮನ ಸಲ್ಲಿಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಹಿರಿಯರನ್ನು ಸ್ಮರಿಸಿ ಗೌರವ ಅರ್ಪಿಸಿದ ಸದಸ್ಯರು ದೇವಟ್ ಪರಂಬುವಿನಲ್ಲಿ ಅಂತರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು. ಎನ್.ಯು.ನಾಚಪ್ಪ ಅವರು ಮಾತನಾಡಿ ಟಿಪ್ಪುವಿನ ಆಕ್ರಮಣಗಳಿಂದ ಕೊಡವ ವೀರ ಯೋಧರು ರಾಜ್ಯವನ್ನು 32 ಕ್ಕೂ ಹೆಚ್ಚು ಬಾರಿ ರಕ್ಷಿಸಿದರು. ತನ್ನ ಪುನರಾವರ್ತಿತ ಸೋಲುಗಳಿಗೆ ಸೇಡು ತೀರಿಸಿಕೊಳ್ಳುವ ಪ್ರಯತ್ನವಾಗಿ ಟಿಪ್ಪು ಶಾಂತಿಸಭೆಯ ಸಂಚು ಹೂಡಿ ಕೊಡವರ ನಾಶಕ್ಕೆ ಕಾರಣನಾದನು. ಇಂದು ಉಳಿದಿರುವ ಆದಿಮಸಂಜಾತ ಕೊಡವ ಜನಾಂಗದ ಸಮಗ್ರ ಸಬಲೀಕರಣಕ್ಕೆ ಮತ್ತು ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯನ್ನು ಪಡೆಯಲು ಹಿರಿಯರ ಆಶೀರ್ವಾದ ಪಡೆಯಲಾಯಿತು ಎಂದರು. ಕೊಡವ ನರಮೇಧದ ದೇವಟ್ ಪರಂಬುವಿನಲ್ಲಿ ಅಂತರಾಷ್ಟ್ರೀಯ ಸ್ಮಾರಕ, ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ಸ್ಮಾರಕಗಳನ್ನು ಸ್ಥಾಪಿಸಬೇಕು. ದೇವಟ್ ಪರಂಬು, ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ನಡೆದ ಕೊಡವ ಜನಾಂಗೀಯ ಸಮುದಾಯದ ಸದಸ್ಯರ ರಾಜಕೀಯ ಹತ್ಯೆಗಳನ್ನು ಅಂತರಾಷ್ಟ್ರೀಯ ಸ್ಮರಣೆಯ ಪಟ್ಟಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು. ಕುಮಾರಿ ಕಲ್ಯಂಡ ಧನ್ವಿ, ಕುಮಾರಿ ಕಲಿಯಂಡ ವಿಹಾನ, ಹಿರಿಯರಾದ ಕಲಿಯಂಡ ಪ್ರಕಾಶ್, ಪಟ್ಟಮಾಡ ಕುಶ, ಮಂದಪಂಡ ಮನೋಜ್, ಪುಟ್ಟಿಚಂಡ ಡಾನ್, ಮುಕ್ಕಾಟಿರ ಅಶ್ವತ್ಥ್, ಕಲಿಯಂಡ ತಿಮ್ಮಯ್ಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಷ್ಪನಮನ ಸಲ್ಲಿಸಿದರು.











