ವಿರಾಜಪೇಟೆ ಜ.10 : ಗಡಿ ಭಾಗದಲ್ಲಿ ಸೂಕ್ತ ತಪಾಸಣೆ ಕೇಂದ್ರಗಳು ಇಲ್ಲದೆ ತೆರಿಗೆ ವಂಚಿಸಿ ರಾಜ್ಯ ಗಡಿ ಪ್ರವೇಶ ಮಾಡುವ ಅಂತರ್ ರಾಜ್ಯ ವಾಹನಗಳಿಂದ ರಾಜ್ಯ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಜಿಲ್ಲೆಯಲ್ಲಿ ಎಲ್ಲಾ ಗಡಿ ಭಾಗದಲ್ಲಿ ಆರ್.ಟಿ.ಓ. ತಪಾಸಣೆ ಕೇಂದ್ರವನ್ನು ಆರಂಭಿಸುವಂತೆ ಕರ್ನಾಟಕ ರಾಜ್ಯ ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೆಷನ್ ನ ಜಿಲ್ಲಾ ಶಾಖೆ ಒತ್ತಾಯಿಸಿದೆ.
ಕರ್ನಾಟಕ ರಾಜ್ಯ ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೆಷನ್ ಕೊಡಗು ಜಿಲ್ಲಾ ಶಾಖೆಯ ವತಿಯಿಂದ ರಾಜ್ಯದ ಗಡಿಭಾಗವಾದ ವಿರಾಜಪೇಟೆ-ಪೆರುಂಬಾಡಿ ಪೊಲೀಸ್ ತಪಾಸಣೆ ಕೇಂದ್ರ ಬಳಿ ಜಿಲ್ಲಾ ಘಟಕದ ಮಾಜಿ ಗೌರವಧ್ಯಕ್ಷ ಎಂ.ಎ.ರಫೀಕ್ ಮಾತನಾಡಿ, ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜಿಲ್ಲೆಯ ಗಡಿದಾಟಿ ಪ್ರವಾಸಿ ವಾಹನಗಳು ಜಿಲ್ಲೆಗೆ ಮತ್ತು ರಾಜ್ಯ ಇತರ ಭಾಗಗಳಿಗೆ ತೆರಳುತ್ತವೆ. ಆಗಮಿಸುವ ಎಲ್ಲಾ ವಾಹನಗಳ ದಾಖಲೆಗಳನ್ನು ಪರಿಶೀಲನೆ ಮಾಡುವ ತಪಾಸಣೆ ಕೇಂದ್ರಗಳಿ ಇಲ್ಲದಿರುವುದು ನಮ್ಮ ದೌರ್ಬಲ್ಯವಾಗಿದೆ ಎಂದರು.
ರಾಜ್ಯದ ತೆರಿಗೆಯನ್ನು ವಂಚಿಸಿ ಜಿಲ್ಲೆಗೆ ವಾಹನಗಳು ಬರುತ್ತಿರುವುದು ಇಲಾಖೆಯ ಗಮನಕ್ಕೆ ಬಂದರು ಮೌನ ವಹಿಸಿರುವುದು ಖಂಡನೀಯ. ಜಿಲ್ಲೆಯಲ್ಲಿ ಪ್ರವಾಸಿ ವಾಹನಗಳನ್ನು ನಂಬಿಕೊಂಡು ಸಾವಿರಾರು ಸಂಖ್ಯೆಯಲ್ಲಿ ವಾಹನ ಚಾಲಕರು ಮತ್ತು ಮಾಲೀಕರು ಜೀವನ ಸಾಗಿಸುತಿದ್ದಾರೆ. ವಾಹನಗಳ ಎಲ್ಲಾ ದಾಖಲಾತಿಗಳನ್ನು ಕ್ರಮಬದ್ಧವಾಗಿ ಹೊಂದಿದ್ದರು ಬಾಡಿಗೆಯಿಂದ ವಂಚಿತರಾಗಿದ್ದೇವೆ. ಆದ್ದರಿಂದ ಗಡಿ ಭಾಗದಲ್ಲಿ ಆರ್.ಟಿ.ಓ ತಪಾಸಣೆ ಕೇಂದ್ರವನ್ನು ಶೀಘ್ರವಾಗಿ ಆರಂಭಿಸಬೇಕು. ಇಲ್ಲಾವಾದಲ್ಲಿ ಜಿಲ್ಲೆಯ ಎಲ್ಲಾ ಗಡಿಭಾಗದಲ್ಲಿ ಜಿಲ್ಲಾ ಘಟಕದ ವತಿಯಿಂದ ರಸ್ತೆ ತಡೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೆಷನ್ ನ ಜಿಲ್ಲಾ ಶಾಖೆಯ ನಿರ್ದೇಶಕ ಬಿ.ವಿ.ಹೇಮಂತ್ ಮಾತನಾಡಿದರು.
ಕರ್ನಾಟಕ ರಾಜ್ಯ ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೆಷನ್ ನ ಜಿಲ್ಲಾ ಶಾಖೆಯ ಅಧ್ಯಕ್ಷ ಡಿ.ಆರ್.ವಿನೋದ್, ಉಪಾಧ್ಯಕ್ಷ ಅಖಿಲ್, ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಸೋಮವಾರಪೇಟೆ, ನಿರ್ದೇಶಕರಾದ ರಾಖೀಬ್, ಮಂಜುನಾಥ್, ಗಗನ್, ಕೆಂಪೇಗೌಡ, ಪ್ರವೀಣ್, ಮಂಜು, ಮತ್ತು ಹರೀಶ್ ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ