ವಿರಾಜಪೇಟೆ ಜ.12 : ಕಂದಾಯ ಇಲಾಖೆಯ ವತಿಯಿಂದ ವಿರಾeಪೇಟೆಯ ಮಹಿಳಾ ಸಮಾಜದಲ್ಲಿ ನಡೆದ ಸಾಗುವಳಿ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸರಕಾರದ ಆದೇಶದಂತೆ ಅರ್ಜಿ ಸಲ್ಲಿಸಿದ ತಾಲೂಕಿನ ಅರ್ಹ ಫಲಾನುಭವಿಗಳಿಗೆ ವಿತರಿಸಿದರು.
ವಿರಾಜಪೇಟೆ ತಾಲೂಕು ವ್ಯಾಪ್ತಿಯ ವಿವಿಧ ಯೋಜನೆಗಳಡಿ ಮಾಸಿಕ ಪಿಂಚಣಿ ಆದೇಶ ಪ್ರತಿಯನ್ನು ಮತ್ತು ಬಗರ್ ಹುಕುಂ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಸಾಗುವಳಿ ಚೀಟಿಯನ್ನು ವಿತರಣೆಮಾಡಿದರು.
ಈ ಸಂದರ್ಭ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ ಅವರು ಮುಂದಿನ ದಿನಗಳಲ್ಲಿ ಇನ್ನಷ್ಷು ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ವಿತರಿಸಲಾಗುವುದು ಎಂದರು.
ಇದೇ ಸಂದರ್ಭ ತಾಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಫಲಾನುಭವಿಗಳಿಗೆ ಸುಮಾರು 9 ಸಾಗುವಳಿ ಚೀಟಿ, 92 ವಿವಿಧ ಪಿಂಚಣಿ ಆದೇಶ ಪ್ರತಿ ವಿತರಣೆ ಮಾಡಿದರು.
ಈ ಸಂದರ್ಭ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಬಿಜೆಪಿಯ ಮಾಪಂಗಡ ಯಮುನಾ ಚಂಗಪ್ಪ, ತಾಲೂಕು ತಹಶೀಲ್ದಾರ್ ಅರ್ಚನಾ ಭಟ್, ಕಂದಾಯ ಪರಿವೀಕ್ಷಕ ಎಂ.ಎಲ್ ಹರೀಶ್, ಪೊನ್ನು, ಬಿಜೆಪಿಯ ಮಲ್ಲಂಡ ಮಧು ದೇವಯ್ಯ, ತಾಲೂಕು ಕಚೇರಿ ಸಿಬ್ಬಂದಿಗಳು, ಕಂದಾಯ ಇಲಾಖೆಯ ಸಿಬ್ಬಂದಿಗಳು, ತಾಲ್ಲೂಕಿನ ವಿವಿಧೆಡೆಗಳಿಂದ ಆಗಮಿಸಿದ ಫಲಾನುಭವಿಗಳು ಹಾಜರಿದ್ದರು.