ಮಡಿಕೇರಿ ನ.23 NEWS DESK : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ 36ನೇ ವಾರ್ಷಿಕ ಕೊಡವ ನ್ಯಾಷನಲ್ ಡೇಯನ್ನು ನ.26ರಂದು ಕ್ಯಾಪಿಟಲ್ ವಿಲೇಜ್ನಲ್ಲಿ ಭಾರತೀಯ ಸಂವಿಧಾನ ದಿನಾಚರಣೆಯೊಂದಿಗೆ ಆಚರಿಸಲಾಗುವುದು ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವ ಜನಾಂಗದ ಹಕ್ಕುಗಳು, ಗುರುತು, ಸಂಸ್ಕøತಿ ಮತ್ತು ಸ್ವಾಭಿಮಾನವನ್ನು ಪ್ರತಿಪಾದಿಸುತ್ತಿರುವ ಸಿಎನ್ಸಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸ್ವ-ಆಡಳಿತ ಹಾಗೂ ಆಂತರಿಕ ರಾಜಕೀಯ ಸ್ವ-ನಿರ್ಣಯ ಹಕ್ಕು ಸೇರಿದಂತೆ ತನ್ನ ಬಹುಕಾಲದ ಶಾಂತಿಯುತ ಆಕಾಂಕ್ಷೆಗಳನ್ನು ಪುನರುಚ್ಚರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಹೇಳಿದ್ದಾರೆ. ಕೊಡವರ ವಂಶಾವಳಿ ಮತ್ತು ವಿಶಿಷ್ಟ ಭೂಹಕ್ಕುಗಳ ಕುರಿತು ಸಂಶೋಧನೆ ನಡೆಸಿರುವ ಅವರು, ಕೊಡವರ ಏಕ-ಜನಾಂಗೀಯತೆ ಕುರಿತು ಪಿಎಚ್.ಡಿ ಪಡೆದಿರುವ ಅಂತಾರಾಷ್ಟ್ರೀಯ ಖ್ಯಾತಿಯ ಮಾನವಶಾಸ್ತ್ರಜ್ಞ ಪ್ರೊ.ಡಾ.ಎಂ.ಎ.ಕಲಾಂ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೊಡವಲ್ಯಾಂಡ್ ಮತ್ತು ಕೊಡವರಿಗೆ ವಿಶೇಷ ಸ್ಥಾನಮಾನ ಕೋರಿ ಸಲ್ಲಿಸಿರುವ ಪ್ರಕರಣದಲ್ಲಿ ಡಾ.ಸುಬ್ರಮಣಿಯನ್ ಸ್ವಾಮಿ ಅವರಿಗೆ ಸಹಾಯ ಮಾಡುತ್ತಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿ ಕಿರಣ್ ನಾರಾಯಣ್ ಅವರು ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಸಮಾಜ ಸೇವಕ ಹಾಗೂ ಖ್ಯಾತ ವೈದ್ಯ ಡಾ.ಮಾತಂಡ ಅಯ್ಯಪ್ಪ ಅವರು ಗೌರವ ಅತಿಥಿಗಳಾಗಿ ಹಾಗೂ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಡೀನ್ ಪ್ರೊ.ಪಿ.ಎಚ್.ಮೊಹಮ್ಮದ್ ಅವರು ಅತಿಥಿಯಾಗಿ ಉಪಸ್ಥಿತರಿರುವರು. ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹತ್ತು ಪ್ರಮುಖ ಬೇಡಿಕೆಗಳ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದು ಎನ್.ಯು.ನಾಚಪ್ಪ ಮಾಹಿತಿ ನೀಡಿದ್ದಾರೆ. ಕೊಡವಲ್ಯಾಂಡ್ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ವಿಶೇಷ ರಾಜಕೀಯ ಪ್ರಾತಿನಿಧ್ಯ, ಪರಿಶಿಷ್ಟ ಪಂಗಡ ಸ್ಥಾನಮಾನ, 2027ರ ಜನಗಣತಿಯಲ್ಲಿ ಕೊಡವರಿಗೆ ಪ್ರತ್ಯೇಕ ಕೋಡ್ ಮತ್ತು ಕಾಲಂ, ಕೊಡವ ತಕ್ ಭಾಷೆಗೆ ಸಂವಿಧಾನದ 8ನೇ ಅನುಸೂಚಿಯಲ್ಲಿ ಮಾನ್ಯತೆ ಹಾಗೂ ಗನ್-ತೋಕ್ ಸಂಸ್ಕಾರದ ರಕ್ಷಣೆ ನೀಡಬೇಕು. ಕೊಡವ ಪವಿತ್ರ ಪರಂಪರೆ ಮತ್ತು ಮಂದ್, ದೇವಕಾಡ್ ಹಾಗೂ ತಲಕಾವೇರಿಗೆ ಯುನೆಸ್ಕೋ ಪರಂಪರೆ ಮಾನ್ಯತೆ, ಜಮ್ಮಭೂಮಿಯ ಹಕ್ಕುಗಳ ಮರುಸ್ಥಾಪನೆ, ದೇವಟ್ ಪರಂಬ್ ಹತ್ಯಾಕಾಂಡಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ, ಕೊಡವ ಪ್ರದೇಶಕ್ಕೆ ಒಳರೇಖೆ ಪರವಾನಗಿ ಹಾಗೂ ಕೊಡವ ಇತಿಹಾಸದ ನೈಜ ನಿರೂಪಣೆಯನ್ನು ಪುನಃಸ್ಥಾಪಿಸುವ ಬೇಡಿಕೆಗಳನ್ನು ಮುಂದಿಡಲಾಗುವುದು. ಸಿಎನ್ಸಿಯ ರಾಜಕೀಯೇತರ ಸಮಾವೇಶದಲ್ಲಿ ಎಲ್ಲಾ ಕೊಡವರು ಭಾಗವಹಿಸಿ, ಕೊಡವ ಜನಾಂಗೀಯತೆ, ನೀತಿ ಮತ್ತು ಸ್ವಾಭಿಮಾನಕ್ಕಾಗಿ ನಡೆಯುತ್ತಿರುವ ಚಳವಳಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುವಂತೆ ಎನ್.ಯು.ನಾಚಪ್ಪ ಮನವಿ ಮಾಡಿದ್ದಾರೆ.


















