ಸೋಮವಾರಪೇಟೆ ಜ.12 : ಈ ನೆಲದ ‘ಕನ್ನಡ’ ಭಾಷೆಗೆ ಮೊದಲ ಆದ್ಯತೆಯನ್ನು ನೀಡುವುದರ ಜೊತೆಯಲ್ಲೆ, ಬದುಕಿನ ಭಾಷೆಯಾಗಿರುವ ಇಂಗ್ಲೀಷ್ ಜ್ಞಾನವನ್ನು ವಿದ್ಯಾರ್ಥಿಗಳು ಹೊಂದಿಕೊಳ್ಳುವುದು ಅವಶ್ಯವೆಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ತಿಳಿಸಿದರು.
ಕೊಡಗು ಪತ್ರಕರ್ತರ ಸಂಘ ಮತ್ತು ಜ್ಞಾನ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಶಾಲೆಯ ಆವರಣದಲ್ಲಿ ಆಯೋಜಿತ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ‘ಯುವ ದಿನಾಚರಣೆ’ಯನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಭಾಷೆ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡುವುದು ಅವಶ್ಯವಾಗಿರುವುದರ ಜೊತೆಯಲ್ಲೆ, ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಇಡೀ ವಿಶ್ವವೇ ಮಾಹಿತಿಗಳ ವಿನಿಮಯದೊಂದಿಗೆ ಕಿರಿದಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು ಇಂಗ್ಲೀಷ್ ಜ್ಞಾನ ಇಲ್ಲದಿದ್ದಲ್ಲಿ ಯೋಗ್ಯ ಉದ್ಯೋಗವನ್ನು ಪಡೆಯುವುದು ಕಷ್ಟಸಾಧ್ಯವಾದ ಪರಿಸ್ಥಿತಿ ಇದೆಯೆಂದು ಇಂದಿನ ಪರಿಸ್ಥಿತಿಗಳನ್ನು ವಿಶ್ಲೇಷಿಸಿದರು.
ಗ್ರಾಪಂಗಳ ಗ್ರಂಥಾಲಯ ಬಳಸಿ- ಇಂದಿನ ಆಧುನಿಕ ಯುಗದಲ್ಲಿ ಜಗತ್ತಿನ ಎಲ್ಲಾ ವಿಚಾರಗಳ ಅರಿವನ್ನು ಹೊಂದಿದಾಗ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರತಿ ಗ್ರಾಪಂಗಳಲ್ಲಿ ಗ್ರಂಥಾಲಯಗಳ ವ್ಯವಸ್ಥೆ ಕಲ್ಪಿಸುವ ಮೂಲಕ ಜ್ಞಾನ ಪ್ರಸಾರಕ್ಕೆ ಹೆಚ್ಚಿನ ಒತ್ತನ್ನು ನೀಡಿದೆ. ಇದನ್ನು ಯುವ ಸಮೂಹ ಬಳಸಿಕೊಳ್ಳಬೇಕೆಂದು ಕಿವಿ ಮಾತುಗಳನ್ನಾಡಿದರು.
ಪ್ರತಿ ವಿದ್ಯಾರ್ಥಿಯು ಅಧ್ಯಾಪಕರ ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ಅನುಸರಿಸುವುದಲ್ಲದೆ, ಬದುಕಿಕೊಂದು ಗುರಿಯನ್ನು ಹೊಂದಿ ಅದನ್ನು ಸಾಧಿಸುವ ನಿಟ್ಟಿನಲ್ಲಿ ಶ್ರಮಿಸಿದಲ್ಲಿ ಯಶಸ್ಸು ಖಚಿತ. ಸ್ವಾಮಿ ವಿವೇಕಾನಂದರು ಯುವ ಸಮೂಹಕ್ಕೆ ಸ್ಪೂರ್ತಿಯಾಗಿದ್ದು, ಅವರ ನುಡಿಯಂತೆ ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಯಾಗುವವರೆಗೆ ವಿಶ್ರಮಿಸಕೂಡದೆಂದು ಕರೆ ನೀಡಿದರು.
ವಿದ್ಯಾಸಂಸ್ಥೆಗಳೆಂದರೆ ಜ್ಞಾನ ದೇಗುಲಗಳೇ ಆಗಿದ್ದು. ಅವುಗಳ ಬೆಳವಣಿಗೆಗೆ ಎಲ್ಲರ ಸಹಕಾರ ಪ್ರೋತ್ಸಾಹ ಅತ್ಯವಶ್ಯವಾಗಿ ಬೇಕೆಂದು ತಿಳಿಸಿದ ಶಾಸಕರು, ಜ್ಞಾನ ವಿಕಾಸ ಶಾಲೆ ಹೆಮ್ಮರವಾಗಿ ಬೆಳೆಯುವಂತಾಗಲೆಂದು ಹಾರೈಸಿದರು.
ಗೌರವಾರ್ಪಣೆ- ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅರಸಿನಗುಪ್ಪೆ ಸಿದ್ದಲಿಂಗಪುರದ ಶ್ರೀ ಮಂಜುನಾಥೇಶ್ವರ ದೇಗುಲದ ಪ್ರಧಾನರಾದ ಶ್ರೀ ರಾಜೇಶ್ ನಾಥ್‍ಜೀ ಮತ್ತು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.
ಶಾಲೆಯ ವಿವಿಧ ವಿಷಯಗಳ ಬೋಧಕರಾಗಿ, ಪ್ರತಿಶತ ಫಲಿತಾಂಶಕ್ಕೆ ಕಾರಣರಾದ ಶಾಲಾ ಶಿಕ್ಷಕರನ್ನು ಇದೇ ಸಂದರ್ಭ ಅತಿಥಿ ಗಣ್ಯರು ಸನ್ಮಾನಿಸಿ ಗೌರವಿಸಿದರು. ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿತ ಸ್ಪರ್ಧಾ ಕಾರ್ಯಕ್ರಮಗಳ ವಿಜೇತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಶಾಲೆಯ ಯೋಗ ಶಿಕ್ಷಕ ಪ್ರಶಾಂತ್, ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್,ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಾಜು, ಪದಾಧಿಕಾರಿಗಳಾದ ಹೆಚ್.ಸಿ. ನಾಗೇಶ್, ಲತಾ ನಾಗೇಶ್ ಪ್ರೇಮಾ ರಿಷಿಕೇಶ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಸ್ವಾಮೀಜಿಗಳನ್ನು ಪರಿಚಯಿಸಿದರು. ಧನ್ಯ ಮತ್ತು ತಂಡದಿಂದ ಸ್ವಾಗತ ನೃತ್ಯ ನಡೆಯಿತು. ಸಂಘದ ಪದಾಧಿಕಾರಿ ತೇಲಪಂಡ ಕವನ್ ಕಾರ್ಯಪ್ಪ ಸರ್ವರನ್ನು ಸ್ವಾಗತಿಸಿದರು.