ಸೋಮವಾರಪೇಟೆ ಜ.12 :ಸ್ವಾಮಿ ವಿವೇಕಾನಂದರು ಮಹಾನ್ ಆಧ್ಯಾತ್ಮಿಕ ವ್ಯಕ್ತಿ ಹಾಗೂ ದಾರ್ಶನಿಕರಾಗಿದ್ದರು. ಯುವ ಜನತೆಗೆ ಸ್ಪೂರ್ತಿಯಾಗಿದ್ದರು ಎಂದು ಜಯವೀರಮಾತೆ ಚರ್ಚ್ ನ ಧರ್ಮಗುರು ಎಂ.ರಾಯಪ್ಪ ಹೇಳಿದರು.
ಸೋಮವಾರಪೇಟೆ ಪುಷ್ಪಗಿರಿ ಜೇಸಿ ಸಂಸ್ಥೆಯ ವತಿಯಿಂದ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ದಿನ ಹಾಗೂ ರಾಷ್ಟ್ರೀಯ ಯುವದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವೇಕಾನಂದರು ಸಹಿಷ್ಣುತಾ ಭಾವವನ್ನು ಪ್ರಪಂಚಕ್ಕೆ ಸಂದೇಶ ನೀಡಿದರು. ಇವರ ಯುವ ಜನಾಂಗದ ಬಗ್ಗೆ ಹೆಚ್ಚಿನ ವಿಶ್ವಾಸ ಹೊಂದಿದ್ದರು. ಈ ಕಾರಣದಿಂದ ಮಹಾನ್ ಚೇತನ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಶನಿವಾರಸಂತೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪರಶಿವಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಶ್ಚಟಗಳಿಂದ ಮುಕ್ತರಾದರೆ ನಿಮ್ಮ ಭವಿಷ್ಯ ಉಜ್ವಲವಾಗಲಿದೆ. ದುಶ್ಚಟಗಳಿಗೆ ಬಲಿಯಾದರೆ ಇಡೀ ಜೀವನ ನಾಶವಾಗಲಿದೆ ಎಂದು ಕಿವಿಮಾತು ಹೇಳಿದರು. ಇತ್ತೀಚಿನ ದಿನಗಳಲ್ಲಿ ಕೆಲ ವಿದ್ಯಾರ್ಥಿಗಳು ಈ ಪಿಡುಗಿಗೆ ಬಲಯಾಗುತ್ತಿರುವ ಬಗ್ಗೆ ತಿಳಿದು ಬಂದಿದೆ. ಶಿಕ್ಷಕರು ಮಾಹಿತಿಯನ್ನು ಕಲೆ ಹಾಕಿ ಪೊಲೀಸರಿಗೆ ತಿಳಿಸಿದರೆ ಅಂತಹ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಕೊಡಿಸಿ, ದುಶ್ಚಟಗಳಿಂದ ಮುಕ್ತಗೊಳಿಸುವ ಅವಕಾಶವಿದೆ ಎಂದು ಹೇಳಿದರು.
ಮಾದಕ ವ್ಯಸನಿಗಳಿಂದ ಅತ್ಯಾಚಾರ, ಕೊಲೆಗಳಂತಹ ಅಪರಾಧಗಳು ಸಂಭವಿಸುತ್ತವೆ. ಒಂದೇ ಸಿರಿಂಜ್ ಉಪಯೋಗಿಸುವುದರಿಂದ ಏಡ್ಸ್ ನಂತ ಮಾರಕ ರೋಗಗಳು ಹರಡುತ್ತವೆ. ಡ್ರಗ್ಸ್ ಪೆಡ್ಲರ್‌ಗಳು ಬ್ಲಾಕ್‌ಮೇಲ್ ಮಾಡಿ, ಡ್ರಗ್ಸ್ ಮಾರುವ ವೃತ್ತಿಗೆ ದೂಡುತ್ತಾರೆ. ಈ ಕಾರಣಗಳಿಂದ ಯುವಜನತೆ ದೃಢಸಂಕಲ್ಪ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೇಸಿ ಅಧ್ಯಕ್ಷೆ ಎಂ.ಎ.ರುಬಿನಾ, ಜೇಸಿರೇಟ್ ಅಧ್ಯಕ್ಷೆ ಪವಿತ್ರ ಲಕ್ಷಿö್ಮÃಕುಮಾರ್, ಜೂನಿಯರ್ ಜೇಸಿ ಅಧ್ಯಕ್ಷೆ ಎಸ್.ಎ.ರಿಶಾ, ಜೇಸಿ ಸ್ಥಾಪಕ ಅಧ್ಯಕ್ಷ ಕೆ.ಎನ್.ತೇಜಸ್ವಿ, ಜೇಸಿ ಕಾರ್ಯದರ್ಶಿ ಜಗದಾಂಭ, ಕಾಲೇಜಿನ ಪ್ರಾಂಶುಪಾಲ ಬಿ.ಆರ್.ಹರೀಶ್, ಪೊಲೀಸ್ ಮಹಿಳಾ ಸಿಬ್ಬಂದಿ ಪೂರ್ಣಿಮಾ ಇದ್ದರು.














