ವಿರಾಜಪೇಟೆ ಜ.13 : ಸ್ವಾಮಿ ವಿವೇಕಾನಂದರ ಜೀವನ ಹಾಗೂ ಭೋದನೆಗಳು ನವ ಸಮಾಜಕ್ಕೆ ಆದರ್ಶವಾಗಿವೆ ಎಂದು ವಿರಾಜಪೇಟೆ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ.ದಯಾನಂದ ಅಭಿಪ್ರಾಯಪಟ್ಟರು.
ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಸ್ವಾಮಿ ವಿವೇಕಾನಂದರು ತಮ್ಮ ಬಾಲ್ಯ ಜೀವನದಿಂದಲೇ ಸಾಧಕರಾಗಿದ್ದಾರೆ. ಅವರ ತತ್ವಗಳು ಆಧುನಿಕ ಜಗತ್ತಿನಲ್ಲಿ ಮಹತ್ವದ್ದಾಗಿದೆ. ಸದಾ ಯುವ ಜನತೆಯ ಪ್ರೇರಕ ಮಾರ್ಗದರ್ಶಕರಾದ ವಿವೇಕಾನಂದರು ಆದ್ಯಾತ್ಮಿಕತೆಯ ಬಗ್ಗೆ ಒಲವು ಹೊಂದಿದ್ದರು ಎಂದು ಹೇಳಿದರು.
ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಅರ್ಜುನ್ ಎಚ್.ಆರ್.ರಾಷ್ಟ್ರೀಯ ಯುವ ದಿನಾಚರಣೆ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಸ್ವಾಮಿ ವಿವೇಕಾನಂದರು ಮಹಾನ್ ಸಂತರಾಗಿದ್ದರು. ಅವರಿಗೆ ಬುದ್ದಿ, ಏಕಾಗ್ರತೆ, ಆದ್ಯಾತ್ಮಿಕ ಬಗ್ಗೆ ಒಲವು ಇತ್ತು. ಅವರು ಯುವ ಶಕ್ತಿಯ ಮಾರ್ಗದರ್ಶಕರಾಗಿದ್ದರಲ್ಲದೆ ಸಮಾಜ ಸುಧಾರಣೆಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಬಿ.ಡಿ.ಹೇಮ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳೆಲ್ಲರೂ ಹಾಜರಿದ್ದರು.