ನಾಪೋಕ್ಲು ಡಿ.20 NEWS DESK : ಇತಿಹಾಸ ಪ್ರಸಿದ್ಧ ಸತ್ಯ ಸಂಧತೆಯ ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತವು ದೇವರ ಹಬ್ಬವು ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು. ಉತ್ಸವದ ಅಂಗವಾಗಿ ಸಾಂಪ್ರದಾಯಿಕವಾಗಿ ಭಕ್ತಾದಿಗಳು ಹಾಗೂ ದೇವಾಲಯದ ತಕ್ಕ ಮುಖ್ಯಸ್ಥರು ದೇವರಿಗೆ ಹರಕೆ ರೂಪದಲ್ಲಿ ಮಣ್ಣಿನ ಪ್ರತಿಕೃತಿ ನಾಯಿ ಒಪ್ಪಿಸುವ ಕಾರ್ಯಕ್ರಮದ ಮುಖಾಂತರ ಹಬ್ಬಕ್ಕೆ ಚಾಲನೆ ನೀಡಿದರು. ನಂತರ ದೇವಾಲಯದ ಆವರಣದಲ್ಲಿ ತಕ್ಕ ಮುಖ್ಯಸ್ಥರು ಸೇರಿ ಕೊಟ್ಟಿ ಹಾಡುವ ಕಾರ್ಯಕ್ರಮ ನಡೆಸಲಾಯಿತು. ರಾತ್ರಿ ಅಂಧಿಬೊಳ್ಕ್ (ದೀಪಾರಾಧನೆ) ಕಾರ್ಯಕ್ರಮ ನಡೆಯಿತು. ನಂತರ ಬೆಳಗ್ಗಿನ ವರೆಗೆ ವಿವಿಧ ದೈವಗಳ ಕೋಲ ನಡೆದು, ಕಲ್ಯಾಟ ಅಜ್ಜಪ್ಪ ದೈವದ ಕೋಲ ನಡೆಯಿತು. ಮಧ್ಯಾಹ್ನ ನೆರೆದಿದ್ದ ಭಕ್ತಾಧಿಗಳಿಗೆ ಅನ್ನದಾನ, ಅಪರಾಹ್ನ ಶ್ರೀ ವಿಷ್ಣು ಮೂರ್ತಿ ಮೇಲೇರಿ (ಚೌಂಡಿ ಅಗ್ನಿ ಪ್ರವೇಶ) ನೆರವೇರಿತು. ಉತ್ಸವದಲ್ಲಿ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಊರ ಮತ್ತು ಪರವೂರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. :: ವಿಶೇಷತೆ :: ಮಕ್ಕಿ ಶ್ರೀ ಶಾಸ್ತವು ದೇವರ ಹಬ್ಬದ ವಿಶೇಷತೆ ಎಂದರೆ ಕೊಡಗಿನ ಎಲ್ಲಾ ದೇವಳದಲ್ಲೂ ವಾರ್ಷಿಕವಾಗಿ ಒಂದು ಉತ್ಸವವಾದರೆ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತವು ದೇವಳದಲ್ಲಿ ಪೂರ್ವ ಪದ್ಧತಿಯಂತೆ ವಾರ್ಷಿಕವಾಗಿ ಎರಡು ಹಬ್ಬಗಳು ಅಂದರೆ ಮೇ ತಿಂಗಳಲ್ಲಿ ಮತ್ತು ಡಿಸೆಂಬರ್ ತಿಂಗಳಲ್ಲಿ ಜರುಗುತ್ತದೆ.
ವರದಿ : ದುಗ್ಗಳ ಸದಾನಂದ.











