ಮಡಿಕೇರಿ ಜ.14 : ಖಾಸಗಿ ವ್ಯಕ್ತಿಗೆ ಸೇರಿದ ಪ್ಯಾರಾ ಗ್ಲೈಡರ್ ಒಂದು ಹಾರಾಟ ನಡೆಸುತ್ತಿದ್ದ ಸಂದರ್ಭ ತಾಂತ್ರಿಕ ದೋಷದಿಂದ ತುರ್ತು ಭೂ ಸ್ಪರ್ಶ ಮಾಡಿದ ಘಟನೆ ಪೊನ್ನಂಪೇಟೆ ಸಮೀಪದ ನಿಟ್ಟೂರು ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಎಂ.ಮುತ್ತಣ್ಣ ಎಂಬುವವರು ತಮಗೆ ಸೇರಿದ ಸ್ವಂತ ಸ್ಥಳದಲ್ಲಿ ಕಳೆದ ಕೆಲವು ಸಮಯದಿಂದ ರನ್ ವೇ ಸಹಿತ 2 ಸೀಟಿನ ಪ್ಯಾರಾ ಗ್ಲೈಡಿಂಗ್ ನಡೆಸುತ್ತಿದ್ದರು. ಎಂದಿನಂತೆ ಶನಿವಾರ ಸಂಜೆ 4 ಗಂಟೆ 45 ನಿಮಿಷ ಸಮಯದಲ್ಲಿ ಪ್ಯಾರಾ ಗ್ಲೈಡಿಂಗ್ ಹಾರಾಟ ನಡೆಸುತ್ತಿದ್ದ ಸಂದರ್ಭ ಅದರ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ನಿಯಂತ್ರಣ ಕಳೆದುಕೊಂಡು ನೇರವಾಗಿ ಬಾನಿನಿಂದ ಕೆಳಗೆ ಇಳಿದ ಗ್ಲೈಡರ್, ನಿಟ್ಟೂರು ಲಕ್ಷ್ಮಣ ತೀರ್ಥ ನದಿಯ ಸೇತುವೆ ಪಕ್ಕದ ಕಾಂಕ್ರೀಟ್ ರಸ್ತೆಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ.
ತುರ್ತು ಭೂ ಸ್ಪರ್ಶದ ಪರಿಣಾಮ ಪ್ಯಾರಾ ಗ್ಲೈಡರ್ ನ ಮುಂಭಾಗ ಮುರಿಯಲ್ಪಟ್ಟಿದ್ದು, ಚಕ್ರ ಸಹಿತ ಕೆಲವು ಭಾಗಗಳಿಗೆ ಹಾನಿಯಾಗಿದೆ. ಗ್ಲೈಡರ್ ನ ಪೈಲಟ್ ಹಾಗೂ ಹಿಂಬದಿ ಸವಾರ ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಕುರಿತು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭೂ ಸ್ಪರ್ಶದಿಂದ ಹಾನಿಗೀಡಾದ ಗ್ಲೈಡರ್ ಅನ್ನು ಟ್ರ್ಯಾಕ್ಟರ್ ಮೂಲಕ ಸ್ಥಳಾಂತರಿಸಲಾಯಿತು.


















