ಮಡಿಕೇರಿ ಜ.18 : ವಿರಾಜಪೇಟೆಯ ಬಿಟ್ಟಂಗಾಲದ ನಾಂಗಾಲ ಗ್ರಾಮದಲ್ಲಿ ಭಾನುವಾರ ನಡೆದ ಯುವತಿ ಬುಟ್ಟಿಯಂಡ ಆರತಿ (24) ಎಂಬುವವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಕೊಲೆ ಆರೋಪಿ ತಿಮ್ಮಯ್ಯನ ಮೃತದೇಹ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.
ಆರತಿಯನ್ನು ಆಕೆಯ ಮನೆಯ ಬಳಿಯೇ ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿತ್ತು. ಈ ಘಟನೆಯ ನಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಆರೋಪಿ ತಿಮ್ಮಯ್ಯನ ಹೆಲ್ಮೆಟ್ ಪತ್ತೆಯಾಗಿತ್ತು. ಅಲ್ಲದೆ ಪಕ್ಕದಲೇ ಇದ್ದ ಕೆರೆಯ ಮೇಲ್ಭಾಗ ಆತನ ಚಪ್ಪಲಿ, ಮೊಬೈಲ್, ಮದ್ಯ ಹಾಗೂ ವಿಷದ ಬಾಟಲ್ ಇರುವುದು ಕಂಡು ಬಂದಿತ್ತು.
ಆರತಿಯನ್ನು ಕೊಲೆ ಮಾಡಿದ ಆರೋಪಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸಂಶಯ ವ್ಯಕ್ತಪಡಿಸಿದ ಪೊಲೀಸರು ಈಜು ತಜ್ಞರ ಮೂಲಕ ಪತ್ತೆ ಕಾರ್ಯಾಚರಣೆ ಆರಂಭಿಸಿದರು. ಆದರೆ ಎರಡು ದಿನಗಳ ಕಾರ್ಯಾಚರಣೆಯ ನಂತರವೂ ಮೃತದೇಹ ಪತ್ತೆಯಾಗದೆ ಇದ್ದ ಕಾರಣ ಕೆರೆಯ ನೀರನ್ನು ಖಾಲಿ ಮಾಡಿ ಶೋಧ ಕಾರ್ಯ ಮುಂದುವರೆಸಲಾಯಿತು.
ಮಂಗಳವಾರ ಮಧ್ಯರಾತ್ರಿ ತಿಮ್ಮಯ್ಯನ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಕೆರೆಯಲ್ಲಿ ಮೃತದೇಹ ದೊರೆಯಲು ವಿಳಂಬವಾದ ಕಾರಣ ಆರೋಪಿ ಪೊಲೀಸರ ದಿಕ್ಕು ತಪ್ಪಿಸಿ ಪರಾರಿಯಾಗಿರಬಹುದೆನ್ನುವ ಶಂಕೆ ಕೂಡ ವ್ಯಕ್ತವಾಗಿತ್ತು. ಈ ಕಾರಣದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆರೋಪಿಯ ಪತ್ತೆಗಾಗಿ ಪೊಲೀಸ್ ಅಧಿಕಾರಿಗಳ ಮೂರು ತಂಡವನ್ನು ರಚಿಸಿದ್ದರು.
ಕೊನೆಗೂ ಆರೋಪಿಯ ಮೃತದೇಹ ದೊರೆಯುವ ಮೂಲಕ ಪೊಲೀಸರು ನಿಟ್ಟುಸಿರು ಬಿಟ್ಟಿದ್ದು, ಕೊಲೆ ಮತ್ತು ಆತ್ಮಹತ್ಯೆಗೆ ಕಾರಣ ಏನು ಎನ್ನುವುದರ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
::: ಕಳ್ಳತನದಲ್ಲೂ ಆರೋಪಿ :::
ಬೆಂಗಳೂರಿನ ಚಿನ್ನಾಭರಣಗಳ ಮಳಿಗೆಯೊಂದರಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಕಳ್ಳತನ ಪ್ರಕರಣದಲ್ಲೂ ತಿಮ್ಮಯ್ಯ ಆರೋಪಿಯಾಗಿದ್ದಾನೆ. ಜೈಲುವಾಸದಿಂದ ಬಿಡುಗಡೆ ಹೊಂದಿ ಸ್ವಂತ ಊರು ವಿರಾಜಪೇಟೆಯ ರುದ್ರಗುಪ್ಪೆಯಲ್ಲಿ ಈತ ವಾಸವಾಗಿದ್ದ.