ಮಡಿಕೇರಿ ಜ.18 : ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಜನ ಸಮಾಜ ಪಕ್ಷ ಸ್ಪರ್ಧಿಸಲಿದ್ದು, ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನವನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ಬಿಎಸ್‍ಪಿ ಯ ಜಿಲ್ಲಾ ಉಸ್ತುವಾರಿ ಜಯಪ್ಪ ಹಾನಗಲ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಪಕ್ಷ ನಿರ್ಧರಿಸಿದೆ. ಸದಸ್ಯತ್ವ ನೋಂದಣಿ ಅಭಿಯಾನ ಈಗಾಗಲೇ ಪ್ರಾರಂಭವಾಗಿದ್ದು, ಕಾರ್ಯಕರ್ತರು ಸದಸ್ಯತ್ವ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕೊಡಗು ಜಿಲ್ಲೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ, ಮೂಲಭೂತ ಸೌಲಭ್ಯ, ನಿವೇಶನ ಮತ್ತು ವಸತಿಗಾಗಿ ಹೋರಾಟಗಳು ನಡೆಯುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಸಮಸ್ಯೆಗಳು ಜೀವಂತವಾಗಿರುವುದು ಮತ್ತು ಮೂಲಭೂತ ಸೌಲಭ್ಯಕ್ಕೂ ಹೋರಾಟಗಳು ನಡೆಯುತ್ತಿರುವುದು ವಿಷಾದನೀಯವೆಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಮಂದಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಸಹಾಯಧನದ ಲಾಭವೂ ಅರ್ಹರ ಪಾಲಾಗುತ್ತಿಲ್ಲವೆಂದು ಆರೋಪಿಸಿದರು.
ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ಬಡವರ ಹಾಗೂ ದುರ್ಬಲ ವರ್ಗದವರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಬೇಕೆಂದು ಜಯಪ್ಪ ಹಾನಗಲ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಸಿದ್ದಪ್ಪ, ಜಿಲ್ಲಾ ಸಂಯೋಜಕ ಮಹಮ್ಮದ್ ಕುಂಞ, ಉಪಾಧ್ಯಕ್ಷರಾದ ಹೆಚ್.ಬಿ.ಬೆಳ್ಯಪ್ಪ, ಬಿ.ಡಿ.ಸರೋಜ ಹಾಗೂ ಸದಸ್ಯ ಹೆಚ್.ಎ.ಪಾಪಣ್ಣ ಉಪಸ್ಥಿತರಿದ್ದರು.















