ಸುಂಟಿಕೊಪ್ಪ, ಜ.20: ಕಲಿಕೆ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಶಿಕ್ಷಣದಿಂದ ಯಾವ ಮಕ್ಕಳು ವಂಚಿತರಾಗಬಾರದು. ಕಲಿಕಾಹಬ್ಬ ಮಕ್ಕಳ ವಿವಿಧ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಲಿದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.
ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆ ಹಾಗೂ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗೆ ಹೋಗದೆ ಅವಿತು ಕುಳಿತುಕೊಳ್ಳುವ ಮಕ್ಕಳನ್ನು ಹುರಿದುಂಬಿಸಿ ಶಾಲೆಗೆ ಕರೆ ತರಲು ವಿದ್ಯಾರ್ಥಿಗಳು ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು ಮುಂದಾಗಬೇಕು. ಶಾಲೆಗಳು ದೇವಾಲಯವಿದ್ದಂತೆ ಜ್ಞಾನದೇಗುಲವಾಗಿದೆ. ನಿರ್ಮಲ ಮನಸ್ಸಿನಿಂದ ಶಾಲೆಗೆ ಬಂದು ಪಾಠಪ್ರವಚನ ಪಠ್ಯೇತರ ಚಟುವಟಿಕೆಗಳು ಮಕ್ಕಳು ತೊಡಗಿಸಿಕೊಳ್ಳಬೇಕೆಂದು ಶಾಸಕರು ಕರೆ ನೀಡಿದರು.
ಕೊಡಗು ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆಯ ಉಪನಿರ್ದೇಶಕ ವಿ.ರಂಗದಾಮಯ್ಯ ಮಾತನಾಡಿ ಕಲಿಕಾ ಹಬ್ಬ ಮಕ್ಕಳಿಗೆ ನಾಡಹಬ್ಬವಿದ್ದಂತೆ ಸಾಹಿತ್ಯ, ಚಿತ್ರಕಲೆ, ನೃತ್ಯ ಹಾಗೂ ಹಾಡು ಮೊದಲಾದ ವಿಭಾಗದಲ್ಲಿ ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶಿಸಲು ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಸಮುದಾಯದ ಸಹಭಾಗಿತ್ವದಲ್ಲಿ ಕಲಿಕಾಹಬ್ಬ ನಡೆಸುತ್ತಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾದ ಕಾರ್ಯಕ್ರಮವಾಗಿದೆ. ಮಕ್ಕಳ ಸರ್ವತೋಮುಖ ಕಲಿಕಾ ವೃದ್ಧಿಗೆ ಇದು ಕಾರಣೀಭೂತವಾಗುತ್ತದೆ. ಇದರಿಂದ ಮುಂದಿನ ಶೈಕ್ಷಣಿಕಮಟ್ಟ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಎಲ್ಲಾ ಸರಕಾರಗಳು ಮಕ್ಕಳ ಶೈಕ್ಷಣಿಕ ಮಟ್ಟ ಹೆಚ್ಚಿಸಲು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ ಕಲಿಕಾ ಹಬ್ಬದಿಂದ ಮಕ್ಕಳ ಜ್ಞಾನಾಭಿವೃದ್ಧಿ ಹೆಚ್ಚಲಿದೆ ಎಂದು ಹೇಳಿದರು.
ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಮಾಜಿ ತಾ.ಪಂ. ಸದಸ್ಯೆ ವಿಮಲಾವತಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರ ವಹಿಸಿದ್ದರು. ಸುಂಟಿಕೊಪ್ಪ ಗ್ರಾ.ಪಂ.ಸದಸ್ಯರುಗಳಾದ ಆಲಿಕುಟ್ಟಿ, ಶಬ್ಬೀರ್, ಮಂಜುನಾಥ, ಸೋಮನಾಥ, ವಸಂತಿ, ನಾಗರತ್ನ ಸುರೇಶ್, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಫೀಕ್ ಖಾನ್, ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ, ಸರಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಗೀತಾ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಕೊಡಗು ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್, ಖಜಾಂಜಿ ಟಿ.ಜೆ.ಶೈಲಾ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಇ.ನಂದ, ಸರಕಾರಿ ಪ್ರಾಥಮಿಕ ಶಾಲೆಯನೌಕರರ ಸಂಘದ ಸಹಕಾರ್ಯದರ್ಶಿ ಸೌಭಾಗ್ಯ, ಸಿಆರ್.ಪಿ.ಸೀಮಾ ಉಪಸ್ಥಿತರಿದ್ದರು.
ಮಕ್ಕಳು ಸ್ವತಃ ತಾವೇ ತಯಾರಿಸಿದ ಕರ ಕುಶಲತೆಗಳನ್ನು ನಿರ್ಮಿಸಿ ಪ್ರದರ್ಶಿಸಿದರು. ವಿವಿಧ ಗ್ರಾಮೀಣ ಕ್ರೀಡೆಗಳಲ್ಲಿ ತೊಡಗಿಸಿಕೊಂಡರು.