ವಿರಾಜಪೇಟೆ ಜ.19 : ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರ ಜೊತೆಗೆ ಅವರಲ್ಲಿನ ವೈಜ್ಞಾನಿಕ ಮತ್ತು ಕೌಶಲ್ಯ ಆಧಾರಿತ ಕಲೆಗಳನ್ನು ಗುರುತಿಸಲು ಮಕ್ಕಳ ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಹೇಳಿದರು.
ವಿರಾಜಪೇಟೆಯ ಹೆಗ್ಗಳ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಕಲ್ತೋಡು ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬವನ್ನು ಬಣ್ಣ ತುಂಬಿದ ಬಲೂನು ಒಡೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಮಕ್ಕಳಿಗೆ ಸಮಗ್ರ ಶಿಕ್ಷಣ ದೊರಕಬೇಕು ಎಂಬ ಉದ್ದೇಶದಿಂದ ಈ ಕಲಿಕಾ ಹಬ್ಬವನ್ನು ಪ್ರತಿಯೊಂದು ಸರ್ಕಾರಿ ಶಾಲೆಗಳಲ್ಲಿ ಆಚರಿಸಲಾಗುತ್ತಿದೆ. ಈ ಹಬ್ಬದಲ್ಲಿ ವಿದ್ಯಾರ್ಥಿಗಳು ತಾವೇ ಚರ್ಚಿಸಿ, ತಾರ್ಕಿಕವಾಗಿ ಆಲೋಚಿಸಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗಗಳನ್ನು ತಾವೇ ಕಂಡುಕೊಳ್ಳುತ್ತಾರೆ. ಶಿಕ್ಷಕರ ಸಹಾಯದ ಮೂಲಕ ಅನೇಕ ವೈಜ್ಞಾನಿಕ ಮತ್ತು ಕೌಶಲ್ಯ ಕಲೆಗಳನ್ನು ಸೃಷ್ಟಿಸುವ ಮೂಲಕ ತಮ್ಮಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರ ಹಾಕುತ್ತಾರೆ. ಮಕ್ಕಳ ಸರ್ವಾಂಗೀಣ ಪ್ರಗತಿ ಮತ್ತು ಸ್ವಕಲಿಕೆಯ ಮಾದರಿಯ ಕಲೆಗಳ ವಿಧಾನವನ್ನು ಕಲಿಸಿಕೊಡುವುದೇ ಈ ಕಲಿಕಾ ಕಾರ್ಯಕ್ರಮದ ಉದ್ದೇಶವಾಗಿದೆ.
ಮಕ್ಕಳು ತಮ್ಮದೇ ಆದ ಲೋಕದಲ್ಲಿ ಸಂತೋಷ ಮತ್ತು ಸಂಭ್ರಮದಿಂದ ತಮ್ಮಲ್ಲಿರುವ ಪ್ರಯೋಗಗಳನ್ನು, ಕೌಶಲ್ಯವನ್ನು ಪ್ರದರ್ಶಿಸಲು ಇಲ್ಲಿ ಮುಕ್ತ ಅವಕಾಶವಿದೆ. ಕಲಿಕಾ ಹಬ್ಬದ ಚಟುವಟಿಕೆಗಳಲ್ಲಿ ಆಡು ಹಾಡು, ಕಾಗದ ಕತ್ತರಿ, ಊರು ತಿಳಿಯೋಣ, ಮಾಡು ಆಡು ಎಂಬ ಗುಂಪುಗಳನ್ನು ರಚಿಸಲಾಗಿದೆ. ಇಲ್ಲಿ ಮಕ್ಕಳು ಖುಷಿಯಿಂದ ಪಾಲ್ಗೊಳ್ಳುವ ಮೂಲಕ ತಮ್ಮ ಚಟುವಟಿಕೆಗಳನ್ನು ಮಾಡುತ್ತಾರೆ. ಈ ಹಬ್ಬ ಎಲ್ಲಾ ಕ್ಲಸ್ಟರ್ ಮಟ್ಟದಲ್ಲಿ ಎರಡು ದಿನಗಳ ಕಾಲ ಜರುಗಲಿದೆ ಎಂದು ಹೇಳಿದರು.
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಶಶಿಕಾಂತ್ ವಹಿಸಿಕೊಂಡು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧ, ಹಾಗೂ ಸದಸ್ಯರುಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಮಣಿ, ಎಸ್‍ಎಸ್‍ಎಲ್‍ಸಿ ನೋಡಲ್ ಅಧಿಕಾರಿ ಅಯ್ಯಪ್ಪ, ಬಿಆರ್‍ಸಿ ಗೀತಾಂಜಲಿ, ಸಿಆರ್‍ಪಿ ವೆಂಕಟೇಶ್, ಪ್ರಾಥಮಿಕ ಸಂಘದ ನಿರ್ದೇಶಕರಾದ ದೇವರಾಜ್, ತಾಲ್ಲೂಕು ದೈಹಿಕ ಶಿಕ್ಷಣ ಉಪಾಧ್ಯಕ್ಷ ತಮ್ಮಯ್ಯ, ಹೆಗ್ಗಳ ಶಾಲೆಯ ಮುಖ್ಯ ಶಿಕ್ಷಕರಾದ ಸುನಿತಾ ಬಿ.ಎಂ. ಹೆಗ್ಗಳ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪಿ.ಎಂ.ಆಶಿಯಾ, ಸರಸ್ವತಿ ಮತ್ತು ಸಹ ಶಿಕ್ಷಕಿಯರು, ಅಡುಗೆ ಸಿಬ್ಬಂದಿ, ಅತಿಥಿ ಶಿಕ್ಷಕರು ಕ್ಲಸ್ಟರ್‍ನ 16 ಶಾಲೆಯ ಕಲಿಕಾ ಹಬ್ಬಕ್ಕೆ ಆಯ್ಕೆಯಾಗಿರುವ 120 ಮಕ್ಕಳು ಶಿಕ್ಷಕರು ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು, ಪೋಷಕರು ಪಾಲ್ಗೊಂಡಿದ್ದರು.









