ಮಡಿಕೇರಿ ಜ.23 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಗುರುತಿಸಿಕೊಳ್ಳುತ್ತಿರುವ ಜಾತ್ಯತೀತ ಜನತಾದಳದ ಮುಖಂಡ ನಾಪಂಡ ಮುತ್ತಪ್ಪ ಅವರಿಗೆ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಜೆಡಿಎಸ್ ವರಿಷ್ಠರ ಆದೇಶವಿಲ್ಲದೆ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವುದು ಮತ್ತು ಪಂಚರತ್ನ ಎಂಬ ವಾಹನದಲ್ಲೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಪ್ರಚಾರ ಮಾಡುತ್ತಿರುವುದು ಸರಿಯಲ್ಲ. ರಾಜ್ಯ ವರಿಷ್ಠರ ಆದೇಶದಂತೆ ನಡೆದುಕೊಳ್ಳದೆ ಸ್ವಯಂ ಪ್ರೇರಿತವಾಗಿ ಪಕ್ಷದೊಳಗೆ ಬಿಕ್ಕಟ್ಟನ್ನು ಹಾಗೂ ಬಿನ್ನಾಭಿಪ್ರಾಯಗಳನ್ನು ತರುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ.
ಪಕ್ಷದ ತಾಲ್ಲೂಕು ಅಧ್ಯಕ್ಷರು ಹಾಗೂ ವಿವಿಧ ಘಟಕಗಳ ಜಿಲ್ಲಾಧ್ಯಕ್ಷರನ್ನು ಹೊರಗಿಟ್ಟು ಯಾವುದೇ ಜಿಲ್ಲಾ ನಾಯಕರನ್ನು ಕೇಳದೆ, ಪಕ್ಷ ಸಂಘಟನೆಗೆ ಚ್ಯುತಿ ತರುವಂತಹ ಕೆಲಸವನ್ನು ಮಾಡುತ್ತಿರುವಿರಿ. ಮಡಿಕೇರಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಹಲವು ಆಕಾಂಕ್ಷಿಗಳು ಇದ್ದು ಎಲ್ಲರನ್ನು ಒಗ್ಗೂಡಿಸಿ ಯಾವುದೇ ಭಿನ್ನಾಭಿಪ್ರಾಯಗಳು ಮೂಡದಂತೆ ಕಾರ್ಯಪ್ರವೃತ್ತರಾಗಬೇಕು.
ಆದರೆ ತಾವು ಇದನ್ನೆಲ್ಲ ನಿರ್ಲಕ್ಷಿಸಿ ಕೆಲವರನ್ನಷ್ಟೇ ಬಳಸಿಕೊಂಡು ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡುತ್ತಿರುವುದರಿಂದ ಪಕ್ಷಕ್ಕೆ ಕಿರಿಕಿರಿ ಉಂಟು ಮಾಡುತ್ತಿದೆ. ಈಗಾಗಲೇ ತಾವು ಹೊರಡಿಸಿರುವ ವಾಹನವನ್ನು ತಡೆ ಹಿಡಿದು ರಾಜ್ಯ ವರಿಷ್ಠರ ಆದೇಶದಂತೆ ನಡೆಯುವುದು ಸೂಕ್ತ. ತಮ್ಮ ಈ ನಡವಳಿಕೆಯಿಂದ ಪಕ್ಷದ ಜಿಲ್ಲಾ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಏರ್ಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ರಾಜ್ಯದ ವರಿಷ್ಠರು ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡದ ಕಾರಣ ಯಾರು ಕೂಡ ಜೆಡಿಎಸ್ ನ ಅಭ್ಯರ್ಥಿ ಎಂದು ಸ್ವಯಂ ಘೋಷಿಸುವುದು ಪಕ್ಷದ ಹಿತದೃಷ್ಟಿಯಿಂದ ಲೋಪವಾಗುತ್ತದೆ. ಇದರಿಂದ ಪಕ್ಷದ ಕಾರ್ಯಕರ್ತರಿಗೆ ಹಾಗೂ ಪಕ್ಷ ಸಂಘಟನೆಗೂ ತೊಂದರೆಯಾಗುವ ಸಾಧ್ಯತೆಗಳಿದೆ.
ಆದ್ದರಿಂದ ಈ ನೋಟಿಸ್ ಸಿಕ್ಕಿದ 7 ದಿನಗಳೊಳಗೆ ಸೂಕ್ತ ಸಮಜಾಯಿಷಿಕೆ ನೀಡುವುದು, ತಪ್ಪಿದಲ್ಲಿ ರಾಜ್ಯ ವರಿಷ್ಠರಿಗೆ ದೂರು ನೀಡಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ನಾಪಂಡ ಮುತ್ತಪ್ಪ ಅವರಿಗೆ ನೀಡಿರುವ ನೋಟಿಸ್ ನಲ್ಲಿ ಕೆ.ಎಂ.ಗಣೇಶ್ ತಿಳಿಸಿದ್ದಾರೆ.








