ಸೋಮವಾರಪೇಟೆ ಜ.26 : ಶನಿವಾರಸಂತೆ ಸಮೀಪದ ಚಂಗಡಹಳ್ಳಿ ಮಠದ ಜೀರ್ಣೋದ್ಧಾರಕ್ಕಾಗಿ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ ಎಂದು ಸಮಿತಿಯ ಸಂಚಾಲಕ ಎಂ.ಎಂ.ಹಾಲಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷರಾಗಿ ಎಚ್.ಬಿ.ರೇಣುಕಾ, ಆಡಳಿತ ಮಂಡಳಿ ಸದಸ್ಯರಾಗಿ ರುದ್ರೇಶ್, ಪ್ರಸಾದ್, ತೀರ್ಥಾಂಬಿಕೆ, ರಾಜಶೇಖರ್ ಸೇರಿದಂತೆ 17 ಮಂದಿ ಸಮಿತಿಯಲ್ಲಿದ್ದಾರೆ ಎಂದು ಹೇಳಿದರು.
ಮಠದ ಅಭಿವೃದ್ಧಿಯನ್ನು ಕಡೆಗಣಿಸಿದ ಬಗ್ಗೆ ಸ್ಥಳೀಯ ಭಕ್ತರು, ಚಿತ್ರದುರ್ಗಾ ಮುರುಘಾಮಠದ ಆಡಳಿತಾಧಿಕಾರಿ ವಸ್ತ್ರದ್ ಅವರಿಗೆ ಲಿಖಿತ ದೂರು ನೀಡಿದ ಹಿನ್ನೆಲೆಯಲ್ಲಿ ಮೂವರು ವೀಕ್ಷಕರನ್ನು ನೇಮಕ ಮಾಡಿದ್ದರು. ವೀಕ್ಷಕರಾದ ಚಂದ್ರಶೇಖರ್, ಮಲ್ಲಿಕಾರ್ಜುನ, ಅಂಜನಪ್ಪ ಅವರುಗಳು ಮಠಕ್ಕೆ ಆಗಮಿಸಿ, ಭಕ್ತರ ಅಭಿಪ್ರಾಯಗಳನ್ನು ಕಲೆ ಹಾಕಿದರು. ನಂತರ ಮಾ.31ರ ಒಳಗೆ ಮಠಕ್ಕೆ ಸ್ವಾಮೀಜಿಯೊಬ್ಬರನ್ನು ನೇಮಿಸುವ ಭರವಸೆ ನೀಡಿದ್ದಾರೆ. ಹಾಗೂ ಮಠದ ವ್ಯವಹಾರದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ ಎಂದು ಹೇಳಿದರು.
ಸೋಮವಾರಪೇಟೆ ತಾಲ್ಲೂಕಿನ ಬಾಚಳ್ಳಿ, ಮಾದಾಪುರ, ಪಿರಿಯಾಪಟ್ಟಣದಲ್ಲಿ ಮಠಗಳಿದ್ದು, ಅಲ್ಲಿನ ಸಮಸ್ಯೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಯಲಿದೆ ಎಂದು ಹಿತರಕ್ಷಣ ಸಮಿತಿಯ ಕಾನೂನು ಸಲಹೆಗಾರ ಎಚ್.ಬಿ.ಈಶ್ವರ್‍ಚಂದ್ರ ವಿದ್ಯಾಸಾಗರ್ ಹೇಳಿದರು. ಗೋಷ್ಠಿಯಲ್ಲಿ ಎಚ್.ಎನ್.ಈಶ್ವರ್ ಇದ್ದರು.