ಮಡಿಕೇರಿ ಜ.31 : ಕೊಡಗು ಜಿಲ್ಲಾ ಎಸ್‍ಕೆಎಸ್‍ಎಸ್‍ಎಫ್ ಸಂಘಟನೆ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ರಕ್ಷಣೆಗೆ ಸೌಹರ್ದತೆಯ ಸಂಕಲ್ಪ ಎಂಬ ಘೋಷವಾಕ್ಯದಲ್ಲಿ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಸೌಹರ್ದ ಸಮ್ಮೇಳನ ನಡೆಯಿತು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಬಾಲಸುಬ್ರಮಣ್ಯ ಕಂಜರ್ಪಣೆ ಮಾತನಾಡಿ, ಜಾತಿ, ಮತಗಳು ಧರ್ಮವಲ್ಲ. ನಾವು ಬದುಕುವ ಶೈಲಿ ಧರ್ಮವಾಗಿದೆ. ನಾವು ಸಜ್ಜನರಾಗಿ ಬದುಕಿ ಬಾಳಿದರೆ ಧರ್ಮ ಉಳಿಯುತ್ತದೆ. ಎಲ್ಲರೂ ನಮ್ಮವರು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಸಮಾಜದ ಶಾಂತಿ ಉಳಿಸಲು ನಾವೆಲ್ಲರು ಒಂದಾಗಬೇಕು. ದೇವರು ನಿಗದಿತ ಜಾಗದಲ್ಲಿಲ್ಲ. ಎಲ್ಲಾ ಕಡೆಗಳಲ್ಲಿ ನಾವು ಮಾಡುವ ಒಳ್ಳೆ ಕೆಲಸಗಳಲ್ಲಿ ದೇವರನ್ನು ನೋಡಬಹುದು. ದುಡ್ಡಿನಿಂದ ಎಲ್ಲವನ್ನೂ ಪಡೆಯಬಹುದು ಎಂಬುದು ಸುಳ್ಳು, ಹಣದಿಂದ ನೆಮ್ಮದಿ, ಆರೋಗ್ಯ ಸಿಗುವುದಿಲ್ಲ. ಸತ್ಕಾರ್ಯಗಳಿಂದ ನೆಮ್ಮದಿಯ ಬದುಕು ಪಡೆಯಬಹುದು ಎಂದರು.
ಕ್ರೈಸ್ತ ಧರ್ಮಗುರು ಫ್ರಾನ್ಸಿಸ್ ಚರಕಲ್ ಮಾತನಾಡಿ, ಜನರ ಭಾವನೆಗಳ ಅಡಿಯಲ್ಲಿ ಭಾರತದ ಸಂವಿಧಾನ ನಿಂತಿದೆ. ಸಂವಿಧಾನದ ಮೌಲ್ಯ ಎತ್ತಿಹಿಡಿಯುವ ಕೆಲಸಬಾಗಬೇಕಾಗಿದೆ. ಪ್ರತಿಯೊಬ್ಬರು ಸೌಹರ್ದತೆಯಿಂದ ಬದುಕುವ ಮೂಲಕ ಶಾಂತಿಯುತ ಹಾಗೂ ಸುಭದ್ರ ಭಾರತ ನಿರ್ಮಾಣ ಮಾಡುವಂತೆ ಕರೆ ನೀಡಿದರು.
ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಧರ್ಮಗುರು ಶುಹೈಬ್ ಫೈಝಿ, ಭಾರತ ಸಂವಿಧಾನ ಏಕತೆಯಿಂದ ಕೂಡಿದ್ದು, ಬದುಕಿಗೆ ಪೂರಕವಾಗಿದೆ. ದೇಶದಲ್ಲಿ ದಲಿತ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆಹಾರ ಪದ್ಧತಿ ಹೆಸರಿನಲ್ಲಿ ಕೊಲೆ, ಜಾತಿ ಸಂಘರ್ಷ ಉಂಟಾಗುತ್ತಿದೆ. ತಾರತಮ್ಯ ಧೋರಣೆ ಸೃಷ್ಟಿಯಾಗುತ್ತಿರುವುದು ಆತಂಕಾರಿ ವಿಚಾರ ಎಂದು ಕಳವಳ ವ್ಯಕ್ತಪಡಿಸಿದ ಅವರು, ಭಾರತದ ಮೂಲತತ್ವವನ್ನು ಉಳಿಸುವುದರೊಂದಿಗೆ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಕರೆ ನೀಡಿದರು.
ಕೊಡಗು ಜಿಲ್ಲಾ ಉಪಖಾಝಿ ಎಂ.ಎಂ.ಅಬ್ದುಲ್ಲಾ ಫೈಝಿ ಮಾತನಾಡಿ, ತಾಯಿನಾಡನ್ನು ಪ್ರೀತಿಸು ಎಂದು ಕಲಿಸಿದ ಇಸ್ಲಾಂ ಧರ್ಮವು ಶಾಂತಿ, ಸೌಹಾರ್ದತೆಯ ಪ್ರತೀಕವಾಗಿದೆ. ಸಮುದಾಯ ಬಾಂಧವರ ಕ್ಷೇಮಾಭಿವೃದ್ಧಿಗೆ ಒಲವು ತೋರುವ ನಾಯಕರುಗಳನ್ನು ಬೆಂಬಲಿಸುವಂತಾಗಬೇಕು ಎಂದು ಕರೆ ನೀಡಿದರು.
ಎಸ್‍ಕೆಎಸ್‍ಎಸ್‍ಎಫ್ ಅಧ್ಯಕ್ಷ ತಮ್ಲಿಕ್ ದಾರಿಮಿ, ಪ್ರಮುಖರಾದ ಬಷೀರ್ ಹಾಜಿ, ಉಮ್ಮರ್ ಫೈಝಿ, ಮಡಿಕೇರಿ ಜಮಾಅತ್ ಅಧ್ಯಕ್ಷ ಅಮೀನ್ ಮೊಯ್ಸಿನ್ ಸೇರಿದಂತೆ ಇನ್ನಿತರರು ಹಾಜರಿದ್ದರು.









