ಸುಂಟಿಕೊಪ್ಪ ಜ.31 : ಕೊಡಗರಹಳ್ಳಿ, ಕಂಬಿಬಾಣೆ, ಚಿಕ್ಲಿಹೊಳೆ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಕೊಡಗರಹಳ್ಳಿಯ ಸಂಜೀವಗಲ್ಲಿಯಲ್ಲಿ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಈ ವ್ಯಾಪ್ತಿಯ ಮಣ್ಣು ಎರೆಮಣ್ಣಾದ ಹಿನ್ನಲೆಯಲ್ಲಿ ಡಾಂಬರೀಕರಣ ಮಾಡಿದರೂ ಅದು ನಿಲ್ಲದೆ ರಸ್ತೆ ಗುಂಡಿ ಬಿದ್ದು ಸಂಚಾರಕ್ಕೆ ದುಸ್ತರವೆನ್ನಿಸಿತ್ತು. ಆದ್ದರಿಂದ ಕಾಂಕ್ರೀಟ್ ರಸ್ತೆಗೆ ಅನುಮೋದನೆ ಪಡೆದು ಈಗಾಗಲೇ 2 ಹಂತದ ಕಾಮಗಾರಿ ಪೂರೈಸಿದ್ದು, ಇದೀಗ ಮೂರನೇ ಹಂತದ ಮುಂದುವರಿದ ಕಾಮಗಾರಿಯನ್ನು ರೂ 1.50 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಗಮನ ಹರಿಸುವಂತೆ ಸಲಹೆ ನೀಡಿದರು.
ಸೋಮವಾರಪೇಟೆ ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಡಾ.ಶಶಿಕಾಂತ್ ರೈ ಮಾತನಾಡಿ ಈಗಾಗಲೇ ರಸ್ತೆ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಸರಿಸುಮಾರು 2 ಕಿ.ಮೀ.ರಸ್ತೆ ಬಾಕಿಯಿದ್ದು ಇದನ್ನು ಕೂಡ ಶಾಸಕರು ಅದಷ್ಟು ಅನುದಾನ ಒದಗಿಸುವ ಮೂಲಕ ರಸ್ತೆ ಕಾವiಗಾರಿಯನ್ನು ಪೂರ್ಣಗೊಳಿಸಬೇಕೆಂದು ಮನವಿ ಮಾಡಿದರು.
ತಕ್ಷಣ ಪ್ರತಿಕ್ರಿಯಿಸಿದ ಶಾಸಕರು 2 ತಿಂಗಳ ಒಳಗಾಗಿ ಅನುದಾನ ಮಂಜೂರು ಮಾಡಿಸಿ ಕಾಮಗಾರಿಯನ್ನು ಪೂರೈಸುವುದಾಗಿ ಖಚಿತ ಭರವಸೆ ನೀಡಿದರು.
ಈ ಸಂದರ್ಭ ಕೊಡಗರಹಳ್ಳಿ ಗ್ರಾ.ಪಂ. ಅಧ್ಯಕ್ಷ ಸುನಿತ್, ಪಿಡಿಓ ರಾಜಶೇಖರ್, ಸದಸ್ಯರು, ಕಂಬಿಬಾಣೆ ಗ್ರಾ.ಪಂ.ಅಧ್ಯಕ್ಷೆ ಮಧುನಾಗಪ್ಪ, ಪಿಡಿಓ ಮಧುಮತಿ, ಸದಸ್ಯರುಗಳು, ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ, ಯುವಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಮತ್ತಿತರರು ಹಾಜರಿದ್ದರು.