ಮಡಿಕೇರಿ ಜ.31 : ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಫೆ.1 ರಿಂದ ರಾಜ್ಯವ್ಯಾಪಿ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘ ತಿಳಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಡಿ.ಡಿ.ಈರಪ್ಪ, ರಾಜ್ಯ ಸರ್ಕಾರ ಹೊರಗುತ್ತಿಗೆ ನೌಕರರನ್ನು ಮಲತಾಯಿ ಧೋರಣೆಯಿಂದ ನೋಡುತ್ತಿದೆ ಎಂದು ಆರೋಪಿಸಿದರು.
ಈ ಬಾರಿ ಬೇಡಿಕೆ ಈಡೇರುವವರೆಗೆ ನೀರು ಸರಬರಾಜುದಾರರು, ಡಾಟಾ ಆಪರೇಟರ್‍ಗಳು, ಸ್ವಚ್ಛತಾ ಕಾರ್ಮಿಕರು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಿದ್ದಾರೆ. ಮಡಿಕೇರಿಯಲ್ಲಿ ಕೂಡ ನಗರಸಭೆಯ ಎದುರು ಮೌನ ಪ್ರತಿಭಟನೆ ನಡೆಸಲಾಗುವುದು ಎಂದರು.
ಸಾರ್ವಜನಿಕರಿಗೆ ತೊಂದರೆಯಾಗದಂತೆ ನೀರು ಸರಬರಾಜಿಗೆ ಬದಲಿ ವ್ಯವಸ್ಥೆಯನ್ನು ಮಾಡಲಾಗಿದ್ದು, ನಗರದ ಸ್ವಚ್ಛತಾ ಕಾರ್ಯಗಳನ್ನು ಸ್ಥಳಗಿತಗೊಳಿಸಲಾಗುವುದು. ಸಾರ್ವಜನಿಕರು ನೌಕರರ ಸಮಸ್ಯೆಯನ್ನು ಅರಿತು ಸಹಕರಿಸುವಂತೆ ಮನವಿ ಮಾಡಿದರು.
ಸರ್ಕಾರ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ವಾಹನ ಚಾಲಕರು, ನೀರು ಸರಬರಾಜು ಸಹಾಯಕರು, ಡಾಟ ಆಪರೇಟರುಗಳು ಸೇರಿದಂತೆ 15 ಸಾವಿರಕ್ಕು ಹೆಚ್ಚು ನೌಕರರನ್ನು ಗುತ್ತಿಗೆ ಆಧಾರದಲ್ಲಿ ಉಳಿಸಿಕೊಂಡು ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿದರು.
ಹೊರಗುತ್ತಿಗೆ ನೌಕರರನ್ನು ಪೌರಕಾಮಿಕರ ಮಾದರಿಯಲ್ಲಿ ನೇರ ವೇತನ ಪಾವತಿಗೊಳಪಡಿಸುವವರೆಗೆ ಮುಷ್ಕರ ಮುಂದುವರೆಯಲಿದೆ ಎಂದು ಈರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎ.ಎ.ಬೋಪಣ್ಣ, ಕಾರ್ಯದರ್ಶಿ ಟಿ.ಬಿ.ರಮೇಶ್ ಕುಟ್ಟಪ್ಪ, ಖಜಾಂಚಿ ಎಂ.ಎ.ಕಬೀರ್ ಅಹಮ್ಮದ್ ಹಾಗೂ ಸಂಚಾಲಕ ಕೆ.ಎಸ್.ಮಹದೇವಪ್ಪ ಉಪಸ್ಥಿತರಿದ್ದರು.









