ನಾಪೋಕ್ಲು ಫೆ.7 : ಇತ್ತೀಚಿನ ದಿನಗಳಲ್ಲಿ ಪರಿಸರಕ್ಕೆ ಮಾರಕವಾಗಿರುವ ಇ-ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿದ್ದು, ಅವುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಸಂಸ್ಥೆ ನಾಪೋಕ್ಲುವಿನಲ್ಲಿ ಇ-ತ್ಯಾಜ್ಯ ಸಂಗ್ರಹಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ ಎಂದು ಸಂಸ್ಥೆಯ ವಲಯಾಧ್ಯಕ್ಷ ಲಯನ್ ಮುಕ್ಕಾಟಿರ ಎಂ.ವಿನಯ ತಿಳಿಸಿದ್ದಾರೆ.
ನಾಪೋಕ್ಲುವಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಮನೆಯಲ್ಲಿ ಇ-ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿದೆ. ಇ-ತ್ಯಾಜ್ಯ ಉಪಯೋಗಕ್ಕೆ ಬಾರದೇ ಇರುವಂತಹ ಎಲೆಕ್ಟ್ರಾನಿಕ್ ವಸ್ತುಗಳು, ಕಂಪ್ಯೂಟರ್ ತ್ಯಾಜ್ಯಗಳು, ಕೆಟ್ಟು ಹೋಗಿರುವ ಎಲೆಕ್ಟ್ರಿಕಲ್ ಉಪಕರಣಗಳು, ಮೊಬೈಲ್ಗಳು ಇತ್ಯಾದಿ ವಸ್ತುಗಳಿಂದ ಪರಿಸರ ಮಾಲಿನ್ಯದ ಜೊತೆಗೆ ಆರೋಗ್ಯಕ್ಕೂ ದುಷ್ಪರಿಣಾಮ ಉಂಟಾಗಲಿದೆ ಎಂದರು.
ದೇಶದಲ್ಲಿ ಸುಮಾರು 32 ಲಕ್ಷ ಟನ್ ಇ-ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಹೆಚ್ಚುತ್ತಿರುವ ಬೇಡಿಕೆ, ಪರಿಸರ ಸ್ನೇಹಿ ವಸ್ತುಗಳ ಅಲಭ್ಯತೆ, ಸೂಕ್ತ ವೈಜ್ಞಾನಿಕ ರೀತಿ ವಿಲೇವಾರಿ ಕೊರತೆಯಿಂದ ಸಮಸ್ಯೆ ಹೆಚ್ಚುತ್ತಿದೆ. ಪಾದರಸ, ಲಿಥಿಯಂ, ಬೋರಿಯಂ ನಂತಹ ರಾಸಾಯನಿಕಗಳು ನದಿ, ಸರೋವರಗಳಲ್ಲಿ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದು, ಅವೈಜ್ಞಾನಿಕ ದಹನದಿಂದ ಗಾಳಿಗೆ ಸೇರಿ ಸೀನಾ ಕ್ಯಾಡಿಯಂ ಅನಿಲಗಳು ಮಾರಕ ರೋಗಗಳಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.
ಪರಿಸರಕ್ಕೆ ಮಾರಕವಾಗುತ್ತಿರುವ ಎಲೆಕ್ಟ್ರಾನಿಕ್ ತ್ಯಾಜ್ಯ ವಸ್ತುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವದ ಪ್ರತಿಷ್ಠ ಸೇವಾಸಂಸ್ಥೆಯಾದ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಈಗಾಗಲೇ ಇ-ತ್ಯಾಜ್ಯ ಸಂಗ್ರಹಕ್ಕೆ ಚಾಲನೆ ನೀಡಿದ್ದು, ತ್ಯಾಜ್ಯ ಸಂಗ್ರಹಕ್ಕೆ ನಾಪೋಕ್ಲು ಪೊನ್ನಡ್ ಸೂಪರ್ ಮಾರ್ಕೆಟ್ ಬಳಿ ಸಂಗ್ರಹ ಕೇಂದ್ರವನ್ನು ನಿಗಧಿ ಮಾಡಿದೆ. ಅಲ್ಲದೆ ನಾಪೋಕ್ಲು ಸುತ್ತಮುತ್ತಲಿನ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಗೆ ಈ ಕುರಿತು ಜಾಗೃತಿ ಮೂಡಿಸಿ ತ್ಯಾಜ್ಯಗಳನ್ನು ಸಂಗ್ರಹಿಸಿ ಮಂಗಳೂರಿಗೆ ಸಮರ್ಪಕ ವಿಲೇವಾರಿ ಮಾಡಲು ರವಾನಿಸಲಾಗುವುದೆಂದರು.
ಆದ್ದರಿ0ದ ನಾಗರಿಕರು ತಮ್ಮಲ್ಲಿರುವ ಇ-ತ್ಯಾಜ್ಯವನ್ನು ಫೆ.೯ರ ಒಳಗಾಗಿ ಈ ಸಂಗ್ರಹಣಾ ಕೇಂದ್ರಕ್ಕೆ ತಲುಪಿಸಿ ಪರಿಸರ ಸ್ನೇಹಿ ಕಾರ್ಯದಲ್ಲಿ ಭಾಗಿಯಾಗಿ ಆರೋಗ್ಯಕರ ಪರಿಸರ ನಿರ್ಮಿಸುವಲ್ಲಿ ಸಹರಿಸುವಂತೆ ಮನವಿ ಮಾಡಿದರು.
ಈ ಬಗ್ಗೆ ವಾರದ ಸಂತ ದಿನವಾದ ಇಂದು ಪಟ್ಟಣದ ಅಂಗಡಿಗಳಿಗೆ ನಮ್ಮ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಭೇಟಿ ನೀಡಿದ್ದಲ್ಲದೆ ಸಾರ್ವಜನಿಕರಿಗೆ ಬಿತ್ತಿ ಪತ್ರದ ಜೊತೆಗೆ ಮಾಹಿತಿ ನೀಡಿ ಮನವರಿಕೆ ಮಾಡಿಕೊಟ್ಟು ಸಹಕರಿಸುವಂತೆ ಮನವಿ ಮಾಡಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಲಯನ್ ಕನ್ನಂಬೀರ ಸಿ. ಸುಧಿ ತಿಮ್ಮಯ್ಯ, ಖಜಾಂಚಿ ಲಯನ್ ಮಾದೇಯಂಡ.ಬಿ.ಕುಟ್ಟಪ್ಪ, ಸದಸ್ಯೆ ಬಿದ್ದಾಟಂಡ ಮೇರಿ ಚೆಟ್ಟಿಯಪ್ಪ ಉಪಸ್ಥಿತರಿದ್ದರು.
ವರದಿ : — ದುಗ್ಗಳ ಸದಾನಂದ