ಮಡಿಕೇರಿ ಫೆ.14 : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವತಿಯಿಂದ 2022-23 ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ ಗುರುಶಿಷ್ಯ ಪರಂಪರೆಯಲ್ಲಿ ಅಕಾಡೆಮಿ ವ್ಯಾಪ್ತಿಯೊಳಗೆ ಬರುವ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ನೃತ್ಯ(ಭರತನಾಟ್ಯ, ಕಥಕ್, ಕೂಚಿಪುಡಿ) ಕಥಾಕೀರ್ತನ ಮತ್ತು ಗಮಕ ಕ್ಷೇತ್ರಗಳಲ್ಲಿ ಯುವ ಕಲಾವಿದರಲ್ಲಿ ಕಲಾನೈಪುಣ್ಯತೆಯನ್ನು ಹೆಚ್ಚಿಸುವ ಸಲುವಾಗಿ ಪ್ರತಿಷ್ಠಿತ ಸಂಸ್ಥೆಯ ಗುರುಗಳ ಮೂಲಕ 5 ತಿಂಗಳ ಸಂಗೀತ ನೃತ್ಯ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.
ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳು 16 ರಿಂದ 30 ವರ್ಷದ ಒಳಗಿರಬೇಕು. ಗುರುಗಳ ಬಳಿ ಕನಿಷ್ಠ 2 ವರ್ಷ ಅಭ್ಯಾಸ ಮಾಡಿರಬೇಕು. ಗುರುಗಳ ಪ್ರಮಾಣ ಪತ್ರ ಲಗತ್ತಿಸಬೇಕು. ಓದು ಬರಹ ಬಲ್ಲವರಾಗಿರಬೇಕು. ಕಲಿಯುವ ಆಸಕ್ತಿ ಇದ್ದು ಹೆಚ್ಚಿನ ಅಭ್ಯಾಸ ಮಾಡುವ ಉತ್ಸುಕತೆಯಿರಬೇಕು.
ಪ್ರತಿಷ್ಠಿತ ಸಂಸ್ಥೆಗಳು ಅರ್ಜಿ ಸಲ್ಲಿಸಲು ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿರಬೇಕು. ಸಂಸ್ಥೆ ನೋಂದಣಿ ಹಾಗೂ ನವೀಕರಣ ಪತ್ರ ಲಗತ್ತಿಸಬೇಕು. ಗುರು ಶಿಷ್ಯ ಪರಂಪರೆ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಶಿಬಿರಾರ್ಥಿಗಳು ಹಾಗೂ ಪ್ರತಿಷ್ಠಿತ ಸಂಸ್ಥೆಗಳ ಗುರುಗಳು ನಿಗದಿತ ಅರ್ಜಿಯನ್ನು ಅಕಾಡೆಮಿ ಕಚೇರಿ ವೇಳೆಯಲ್ಲಿ (ಬೆಳಗ್ಗೆ 10 ರಿಂದ ಸಂಜೆ 5.30) ಪಡೆಯಬಹುದು.
ಅಕಾಡೆಮಿ ಅಂರ್ತಜಾಲತಾಣ https://sangee tanrityaacademy.karnataka.gov.in ದ ಮೂಲಕ ಪಡೆದು ಸಲ್ಲಿಸಬಹುದು. ಬೇರೆ ಬೇರೆ ಜಿಲ್ಲೆಯ ಅಭ್ಯರ್ಥಿಗಳು ಆಯಾಯ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಉಚಿತವಾಗಿ ಅರ್ಜಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ ಬೆಂಗಳೂರು-2 ಇಲ್ಲಿಗೆ ಫೆಬ್ರವರಿ, 28 ರೊಳಗೆ ಕಳುಹಿಸಿಕೊಡಬೇಕು. ನಂತರ ಬಂದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಬಂದ ಅರ್ಜಿಗಳನ್ನಾಧರಿಸಿ ಅಕಾಡೆಮಿ ವತಿಯಿಂದ ಪ್ರತಿಷ್ಠಿತ ಸಂಸ್ಥೆಯ ಗುರುಗಳನ್ನು ಆಯ್ಕೆ ಮಾಡಲಾಗುವುದು. ಗುರುಗಳಿಗೆ ಗೌರವಧನ, ಪ್ರೋತ್ಸಾಹಧನವನ್ನು ಅಕಾಡೆಮಿ ವತಿಯಿಂದ ನೀಡಲಾಗುವುದು. ಅಕಾಡೆಮಿ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಬಿ.ನೀಲಮ್ಮ ಅವರು ತಿಳಿಸಿದ್ದಾರೆ.









