ಮಡಿಕೇರಿ ಫೆ.20 : ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಅಳುವಾರದ ಚಿಕ್ಕಅಳುವಾರಮ್ಮ ದೇವಾಲಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ‘ಗ್ರಾಮ ವಾಸ್ತವ್ಯ’ ಕಾರ್ಯಕ್ರಮದಲ್ಲಿ ತೊರೆನೂರು ಗ್ರಾ.ಪಂ.ವ್ಯಾಪ್ತಿಯ ಹಲವು ಸಮಸ್ಯೆಗಳ ಬಗ್ಗೆ ಸ್ಥಳೀಯರು ಬೆಳಕು ಚೆಲ್ಲಿದರು.
ಈಗಾಗಲೇ ಊರುಡುವೆ ಪೈಸಾರಿ ಜಾಗದಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ವಿತರಿಸುವುದು, ಆಶ್ರಯ ಮನೆ ಯೋಜನೆಯಡಿ ಮನೆ ನಿರ್ಮಾಣಕ್ಕೆ ನಿವೇಶನ ಇಲ್ಲದವರಿಗೆ ನಿವೇಶನ ಒದಗಿಸುವುದು, ಗ್ರಾಮದಿಂದ ಗ್ರಾಮಕ್ಕೆ ರಸ್ತೆ ಸಂಪರ್ಕಕ್ಕೆ ಹಂತ ಹಂತವಾಗಿ ಪರಿಹರಿಸುವುದು, ಕಾಡಾನೆ ಹಾವಳಿ ನಿಯಂತ್ರಣ ಸಂಬಂದ ಟ್ರಂಚ್ ನಿರ್ಮಾಣ ಹೀಗೆ ಹಲವು ಸಮಸ್ಯೆಗಳ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಈಗಾಗಲೇ ಪೈಸಾರಿ ಜಾಗದಲ್ಲಿ ಹಲವು ದಶಕಗಳಿಂದ ವಾಸುತ್ತಿರುವವರಿಗೆ 94ಸಿ ರಡಿ ಹಕ್ಕುಪತ್ರ ವಿತರಿಸಲಾಗುವುದು, ತೊರೆನೂರು ಗ್ರಾ.ಪಂ.ವ್ಯಾಪ್ತಿಯ 204 ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಕಲ್ಪಿಸುವುದು, ಗ್ರಾಮ ಗ್ರಾಮಗಳ ಸಂಪರ್ಕ ಸಂಬಂಧ ರಸ್ತೆ ನಿರ್ಮಾಣಕ್ಕೆ ಹಂತ ಹಂತವಾಗಿ ಕೈಗೆತ್ತಿಕೊಳ್ಳುವುದು ಹೀಗೆ ಹಲವು ಸಾರ್ವಜನಿಕ ಕಾರ್ಯಗಳಿಗೆ ಜಿಲ್ಲಾಡಳಿತ ಸ್ಪಂದಿಸಲಿದೆ ಎಂದರು.
ಸಭೆಯ ಆರಂಭದಲ್ಲಿ ಮಾತನಾಡಿದ ಸ್ಥಳೀಯರಾದ ವೆಂಕಟೇಶ್ ಅವರು ಚಿಕ್ಕಅಳುವಾರ ಗ್ರಾಮದಲ್ಲಿ ಕುಡಿಯುವ ನೀರು, ಬೀದಿ ದೀಪ, ರಸ್ತೆ ನಿರ್ಮಾಣ ಮತ್ತಿತರ ಕಾರ್ಯಗಳು ಆಗಬೇಕಿದ್ದು, ಸ್ಥಳ ಪರಿಶೀಲಿಸಿ ರಸ್ತೆ ನಿರ್ಮಾಣಕ್ಕೆ ಸಹಕರಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ತೊರೆನೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವೀಣಾ ಅವರು ರಸ್ತೆ ನಿರ್ಮಾಣ ಸಂಬಂಧ ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗಿದೆ. ಆದರೆ ಭೂ ಮಾಲೀಕರು ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಹಳೇ ರಸ್ತೆ ಇದ್ದಲ್ಲಿ ಅಭಿವೃದ್ಧಿಪಡಿಸಬಹುದಾಗಿದೆ. ಹೊಸ ರಸ್ತೆ ನಿರ್ಮಿಸಬೇಕಾದಲ್ಲಿ ಎಲ್ಲರ ಒಪ್ಪಿಗೆ ಪಡೆದು ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದರು.
ಈ ಕುರಿತು ಸ್ಥಳೀಯ ಮಹಿಳೆಯರೊಬ್ಬರು ಒಂದು ಎತ್ತಿನ ಗಾಡಿಯು ಸಹ ಓಡಾಡಲು ರಸ್ತೆ ಇಲ್ಲ. ಇದರಿಂದ ಎಲ್ಲರ ಓಡಾಟಕ್ಕೆ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡರು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಾ.ಪಂ.ಇಒ ಅವರು ಸ್ಥಳ ಪರಿಶೀಲಿಸಿ ಕೂಡಲೇ ವರದಿ ನೀಡುವಂತೆ ಸೂಚಿಸಿದರು.
ಸ್ಥಳೀಯರೊಬ್ಬರು ಮಾತನಾಡಿ ಕಾಡಂಚಿನ ಗ್ರಾಮಗಳಲ್ಲಿ ಬೀದಿದೀಪ ಅಳವಡಿಸಬೇಕು. ಏತ ನೀರಾವರಿ ಯೋಜನೆಯಡಿ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ.ಸಿಇಒ ಡಾ.ಎಸ್.ಆಕಾಶ ಅವರು ಕಾಡಂಚಿನ ಗ್ರಾಮಗಳಲ್ಲಿ ಬೀದಿ ದೀಪ ಅಳವಡಿಸಲಾಗುವುದು. ನೀರಾವರಿ ನಾಲೆ ಸರಿಪಡಿಸಲಾಗುವುದು. ಕುಡಿಯುವ ನೀರು ಇಲ್ಲದ ಕಡೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಹೇಳಿದರು.
ವಿವಿಧ ನೀರಾವರಿ ಯೋಜನೆಯಡಿ ಹೂಳು ತೆಗೆದ ನಂತರ ಮಣ್ಣನ್ನು ಸ್ಥಳಾಂತರ ಮಾಡಬೇಕು. ಆದರೆ ತೆಗೆದ ಮಣ್ಣನ್ನು ಅಲ್ಲಿಯೇ ಬಿಡುವುದರಿಂದ ಮತ್ತೆ ಮುಚ್ಚಿಕೊಳ್ಳುತ್ತದೆ. ಈ ಬಗ್ಗೆ ನೀರಾವರಿ ಇಲಾಖೆಯ ಎಂಜಿನಿಯರ್‍ಗಳು ಗಮನಹರಿಸಬೇಕು ಎಂದು ಸ್ಥಳೀಯರೊಬ್ಬರು ಒತ್ತಾಯಿಸಿದರು.
ಕಾಡಾನೆ ಹಾವಳಿಯಿಂದ ಬೆಳೆ ಹಾನಿಯಾಗಿದ್ದು, ಹೆಚ್ಚಿನ ಪರಿಹಾರ ನೀಡಬೇಕು ಎಂದು ಸ್ಥಳೀಯರೊಬ್ಬರು ಕೋರಿದರು. ಕೆಲವು ಕುಟುಂಬಗಳಿಗೆ ಸರ್ಕಾರದ ಸವಲತ್ತು ಇನ್ನೂ ಸಹ ತಲುಪಿಲ್ಲ. ಸುಮಾರು 75 ಜನರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದೇವೆ. ಆದ್ದರಿಂದ ಸೌಲಭ್ಯಗಳನ್ನು ತಲುಪಿಸಬೇಕು ಎಂದು ಸ್ಥಳೀಯ ಮಹಿಳೆಯೊಬ್ಬರು ಗ್ರಾಮ ವಾಸ್ತವ್ಯದಲ್ಲಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಅರ್ಹ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಹೇಳಿದರು.
ನೀರಾವರಿ ಬಳಕೆದಾರರ ಸಂಘದ ಸದಸ್ಯರಾದ ಪಾಂಡುರಂಗ ಅವರು ಕೆರೆ ಒತ್ತುವರಿಯಾಗಿರುವ ಜಾಗವನ್ನು ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕೆರೆ ಒತ್ತುವರಿ ತೆರವುಗೊಳಿಸಲು ಮುಂದಾಗಲಾಗಿದೆ. ಆ ನಿಟ್ಟಿನಲ್ಲಿ 6 ಕಡೆಗಳಲ್ಲಿ ಕೆರೆ ಒತ್ತುವರಿ ತೆರವುಗೊಳಿಸಲು ಬಾಕಿ ಇದ್ದು, ಇದನ್ನು ಸಹ ತೆರವುಗೊಳಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ನೊಕ್ಯ ಗ್ರಾಮ ಹೊರತು ಪಡಿಸಿ ಉಳಿದಂತೆ ಎಲ್ಲಾ ಕಡೆಗಳಲ್ಲೂ ಸಾಧ್ಯವಾದಷ್ಟು ಸ್ಮಶಾನಕ್ಕೆ ಭೂಮಿ ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಪಾಂಡುರಂಗ ಅವರು ಮಾತನಾಡಿ ಚಿಕ್ಕಅಳುವಾರದಲ್ಲಿರುವ ಕಾವೇರಿ ವಿಶ್ವವಿದ್ಯಾನಿಲಯಕ್ಕೆ ರಸ್ತೆ ಮಾರ್ಗವನ್ನು ಸರಿಪಡಿಸಬೇಕು ಎಂದು ಕೋರಿದರು.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ,ಸತೀಶ ಅವರು ಎಲ್ಲಾ ಅಭಿವೃದ್ಧಿ ಕಾರ್ಯಗಳು ಹಂತ ಹಂತವಾಗಿ ನಡೆಯಲಿದ್ದು, ಕುಶಾಲನಗರ ಮತ್ತು ಪೊನ್ನಂಪೇಟೆ ತಾಲ್ಲೂಕುಗಳು ಸಹ ಹಂತ ಹಂತವಾಗಿ ಎಲ್ಲಾ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ತಲಾ 10 ಕೋಟಿ ರೂ.ವೆಚ್ಚದಲ್ಲಿ ‘ತಾಲ್ಲೂಕು ಆಡಳಿತ ಭವನ’ ನಿರ್ಮಾಣವಾಗಲಿದೆ. ಕೊಡಗು ಜಿಲ್ಲೆಗೆ ಪ್ರತ್ಯೇಕ ವಿ.ವಿ ಕೂಡ ಘೋಷಣೆಯಾಗಿದ್ದು, ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳು ಕಾರ್ಯ ರೂಪಕ್ಕೆ ಬರಲಿವೆ ಎಂದು ತಿಳಿಸಿದರು.
ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಬೃಹತ್ ನೀರಾವರಿ ಇಲಾಖೆಯ ಇಇ ಪುಟ್ಟಸ್ವಾಮಿ ಅವರು ಹೇಳಿದರು.
ಏತ ನೀರಾವರಿ ಮೂಲಕ ಕಾಲುವೆಗೆ ಸಮರ್ಪಕವಾಗಿ ನೀರು ಒದಗಿಸಬೇಕು ಎಂದು ಸಾರ್ವಜನಿಕರೊಬ್ಬರು ಒತ್ತಾಯಿಸಿದರು.
ತೊರೆನೂರು ಗ್ರಾಮದಲ್ಲಿ ಹಲವು ಕುಟುಂಬಗಳು ಕೈಮಗ್ಗವನ್ನು ನಂಬಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದು, ಇವರಿಗೆ ಸರ್ಕಾರದ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ನೇಕಾರರ ಸಂಘದ ಅಧ್ಯಕ್ಷರಾದ ಪಾಂಡುರಂಗ ಅವರು ಮನವಿ ಮಾಡಿದರು.
ತೊರೆನೂರು ಗ್ರಾ.ಪಂ.ಅಧ್ಯಕ್ಷರಾದ ರೂಪಾ ಮಹೇಶ್ ಅವರು ಜಿಲ್ಲಾಡಳಿತವೇ ಕುಗ್ರಾಮಕ್ಕೆ ಬಂದು ಹಲವು ಸಮಸ್ಯೆಗಳನ್ನು ಪರಿಹರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.