ಮಡಿಕೇರಿ ಫೆ.21 : ಕೊಡವ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡದ ರಾಜ್ಯ ಸರ್ಕಾರ ಕೊಡವರನ್ನು ನಿರಂತರವಾಗಿ ಕಡೆಗಣಿಸುತ್ತಲೇ ಬರುತ್ತಿದೆೆ ಎಂದು ಆರೋಪಿಸಿರುವ ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ, ಸರ್ವ ಕೊಡವರು ಮುಂದಿನ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಇತ್ತೀಚೆಗೆ ಘೋಷಿಸಿದ ಬಜೆಟ್ ಕೊಡವರ ನಿರೀಕ್ಷೆಗಳನ್ನು ಹುಸಿ ಮಾಡಿದೆ. ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದ್ಯತೆ ನೀಡದೆ ನಿರ್ಲಕ್ಷಿಸಲಾಗಿದೆ. ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವ ಬಗ್ಗೆಯೂ ಆಸಕ್ತಿ ತೋರಿಲ್ಲ ಎಂದು ಆರೋಪಿಸಿದ್ದಾರೆ.
ಕೊಡಗು ಪುಟ್ಟ ಜಿಲ್ಲೆಯಾದರೂ ಕಾವೇರಿ ನದಿ ಮತ್ತು ವಾಣಿಜ್ಯ ಬೆಳೆಗಳ ಮೂಲಕ ಇಡೀ ರಾಜ್ಯಕ್ಕೆ ದೊಡ್ಡ ಕೊಡುಗೆಯನ್ನೇ ನೀಡುತ್ತಾ ಬರುತ್ತಿದೆ. ಇಲ್ಲಿನ ಮೂಲ ನಿವಾಸಿಗಳಾದ ಕೊಡವರು ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ. ಅನೇಕರು ಇಂದಿಗೂ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಕಡಿಮೆ ಜನಸಂಖ್ಯೆ ಹೊಂದಿರುವ ಕೊಡವರ ಅಭಿವೃದ್ಧಿ ಅನಿವಾರ್ಯವಾಗಿ ಆಗಲೇಬೇಕಾಗಿದೆ. ಕೊಡಗು ಹಾಗೂ ಕೊಡವರು ಅನುಭವಿಸುತ್ತಿರುವ ಕಷ್ಟನಷ್ಟಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದರೂ ಅಭಿವೃದ್ಧಿ ನಿಗಮವನ್ನು ಸ್ಥಾಪಿಸದೆ ನಿರ್ಲಕ್ಷಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೇಡಿಕೆ ಸಲ್ಲಿಸಿರುವ ಇತರ ಬಹುತೇಕ ಎಲ್ಲಾ ಜಾತಿ, ಜನಾಂಗಕ್ಕೂ ಅಭಿವೃದ್ಧಿ ನಿಗಮವನ್ನು ನೀಡಿರುವ ಸರ್ಕಾರ ಕೊಡವರ ಬಗ್ಗೆ ಮಾತ್ರ ಮಲತಾಯಿ ಧೋರಣೆ ತೋರುತ್ತಿದೆ. ಕೊಡವ ಕುಲಶಾಸ್ತ್ರ ಅಧ್ಯಯನವನ್ನು ಕೂಡ ಮೊಟಕುಗೊಳಿಸಲಾಗಿದೆ. ಕೊಡವರ ಬಗ್ಗೆ ಸರ್ಕಾರಕ್ಕಿರುವ ತಾತ್ಸಾರ ಮನೋಭಾವಕ್ಕೆ ಈ ಬೆಳವಣಿಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.
ತಕ್ಷಣ ಸರ್ಕಾರ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡಲು ಮತ್ತು ಕೊಡವ ಭಾಷೆಯನ್ನು 8ನೇ ಶಡ್ಯೂಲ್ ಗೆ ಸೇರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ತಪ್ಪಿದಲ್ಲಿ ಕೊಡವ ಸಮಾಜಗಳು ಹಾಗೂ ಕೊಡವ ಸಂಘಟನೆಗಳು ಒಗ್ಗೂಡಿ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.










