ಮಡಿಕೇರಿ ಫೆ.23 : ಕಾವೇರಿ ಸನ್ನಿಧಿ ಫಾರ್ ಇಂಡಿಯನ್ ಕಲ್ಚರ್ ಅಧೀನದಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಕಾವೇರಿ ಕನ್ಯಾ ಗುರುಕುಲಂ ನಲ್ಲಿ 2023ನೇ ಸಾಲಿನ ಪ್ರವೇಶಾತಿ ಪ್ರಾರಂಭವಾಗಿದೆ ಎಂದು ಗುರುಕುಲಂ ನ ಸಂಸ್ಥಾಪಕ ಹಾಗೂ ಕೃಷಿ ವಿಜ್ಞಾನಿ ಡಾ.ಕೆ.ಕೆ.ಸುಬ್ರಮಣಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನದಿ ತಟದ ಸುಂದರ ಪರಿಸರದಲ್ಲಿ ಕಾವೇರಿ ಕನ್ಯಾ ಗುರುಕುಲಂ ಇದ್ದು, ಎಸ್‍ಎಸ್‍ಎಲ್‍ಸಿ ಪಾಸಾದ ಹೆಣ್ಣುಮಕ್ಕಳಿಗೆ ಎರಡು ವರ್ಷದ ಸಂಪೂರ್ಣ ಉಚಿತ ಶಿಕ್ಷಣ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಲೆ ಹಾಗೂ ವಾಣಿಜ್ಯ ವಿಭಾಗಗಳ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಶಿಕ್ಷಣ, ಇಂಗ್ಲೀಷ್ ಮತ್ತು ಸಂಸ್ಕøತ ಭಾಷೆ, ಮೌಲ್ಯಗಳು ಧ್ಯಾನ, ಪ್ರಾಣಾಯಮ, ಶಾಸ್ತ್ರೀಯ ಸಂಗೀತ, ಭಗವಗ್ದೀತೆ ಹಾಗೂ ಶ್ಲೋಕ ಪಠಣ, ಪ್ರಯೋಗಿಕ ಕೃಷಿ ಗುರುಕುಲ ಪದ್ಧತಿಯಲ್ಲಿ ಲಭ್ಯವಿದೆ ಎಂದರು. ಅಲ್ಲದೆ ಸ್ಥಳೀಯ ಕಾಲೇಜು ಮುಖಾಂತರ ಟ್ಯಾಗಿಂಗ್ ಪದ್ಧತಿಯಡಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದೆಂದರು.
ಗುರುಕುಲಕ್ಕೆ ಸೇರಲು ಯಾವುದೇ ಜಾತಿ, ಕುಲ ಹಾಗೂ ಭಾಷೆಯ ಹಂಗಿಲ್ಲ. ಭವಿಷ್ಯದಲ್ಲಿ ತಮ್ಮ ನಿರ್ವಹಣೆ ಮಾಡಲು ಸರ್ವ ಸ್ವತಂತ್ರರಾಗುವರು ಹಾಗೂ ಆದರ್ಶ ಸಮಾಜಕ್ಕೆ ಆಕಾರ ಕೊಡಲಬಲ್ಲರು ಎಂಬ ಉದ್ದೇಶದಿಂದ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುತ್ತಿದೆ ಎಂದರು.
ಗುರುಕುಲದಲ್ಲಿ ಒಟ್ಟು 15 ವಿದ್ಯಾರ್ಥಿಗಳಿಗೆ ಪ್ರವೇಶಾತಿ ನಡೆಯಲಿದ್ದು, ಪೋಷಕರ ಸಂದರ್ಶದ ಮೇರೆಗೆ ವಿದ್ಯಾರ್ಥಿಗಳನ್ನು ಆಯ್ಕೆಮಾಡಲಾಗುತ್ತದೆ. ಅಲ್ಲದೆ ಹಿರಿಯ ವಿದ್ಯಾರ್ಥಿಗಳ ಅಭಿಪ್ರಾಯದ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದರು.
ಭಾರತೀಯ ಸಂಸ್ಕೃತಿ , ಪರಂಪರೆಯ ಪರಿಕಲ್ಪನೆಯಡಿಯಲ್ಲಿ ಈ ಗುರುಕುಲ ನಡೆಯುತ್ತಿದ್ದು, ಪಂಜಾಬ್, ಬಿಹಾರ್ ಸೇರಿದಂತೆ ಇತರ ದೇಶಗಳಿಂದ ವಿದ್ಯಾರ್ಥಿಗಳು ಇಲ್ಲಿನ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಿದೇಶಿಯರಿಂದ ತಮ್ಮ ಪರಂಪರೆಯನ್ನು ತಿಳಿದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಲಿದ್ದು, ಆಸಕ್ತ ಯುವತಿಯರು ಹಾಗೂ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಶಿಕ್ಷಕಿ ಎಂ.ಸಿ.ಶೈಲಜ ಮಾತನಾಡಿ, ಗುರುಕುಲದಲ್ಲಿ ಮುಂಜಾನೆ 5 ಗಂಟೆಯಿಂದ ದಿನಚರಿ ಶುರುವಾಗಲಿದ್ದು, ಎಲ್ಲಾ ತರಗತಿಗಳಿಗೆ ಸಮಯ ನಿಗಧಿಪಡಿಸಲಾಗಿದೆ. ಅಲ್ಲದೆ ಎಲ್ಲಾ ತರಗತಿಗಳಿಗೂ ನುರಿತ ಶಿಕ್ಷಕರನ್ನು ಒಳಗೊಂಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗುರುಕುಲಂ ನ ಪ್ರಮುಖರಾದ ಕೆ.ಎಸ್.ಕಲ್ಪನಾ, ಕೆ.ಆರ್.ಅಜಯ್ ಉಪಸ್ಥಿತರಿದ್ದರು.