ಕುಶಾಲನಗರ, ಫೆ.23: ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮವನ್ನು, ಈ ವರ್ಷ ಮತ್ತೆ ಆರಂಭಿಸಲಾಗಿದೆ.
ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಸರ್ಕಾರಿ ಪ್ರೌಢಶಾಲಾ 8ನೇ ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿಸಿರುವ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಕುಶಾಲನಗರ ತಾಲ್ಲೂಕಿನ ಮಕ್ಕಳ ಪ್ರವಾಸಕ್ಕೆ ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾವರಣದಲ್ಲಿ ಚಾಲನೆ ನೀಡಿ ಬೀಳ್ಕೊಡಲಾಯಿತು.
ಪ್ರವಾಸದ ವಿದ್ಯಾರ್ಥಿಗಳಿಗೆ ಕಿಟ್ ವಿತರಿಸುವ ಮೂಲಕ ಪ್ರವಾಸಕ್ಕೆ ಚಾಲನೆ ನೀಡಿದ
ಕುಶಾಲನಗರ ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್ (ಕೇಶವ) ಮಾತನಾಡಿ, “ಕರ್ನಾಟಕ ದರ್ಶನ” ಎಂಬ ಉಚಿತ ಶೈಕ್ಷಣಿಕ ಪ್ರವಾಸದಲ್ಲಿ ಮಕ್ಕಳು ರಾಜ್ಯದ ವಿವಿಧ ಧಾರ್ಮಿಕ, ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ಅವುಗಳ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಪ್ರವಾಸದ ಬಸ್ ಗಳಿಗೆ ಹಸಿರು ನಿಶಾನೆ ನೀಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮದ ಉದ್ದೇಶ, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪರಿಪೂರ್ಣವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಖ್ಯವಾದ ಸ್ಥಳಗಳು ಅಂದರೆ ಸ್ಥಳೀಯ ವೈಜ್ಞಾನಿಕ, ಧಾರ್ಮಿಕ, ಭೌಗೋಳಿಕ, ನೈಸರ್ಗಿಕ, ಐತಿಹಾಸಿಕ, ವಿಜ್ಞಾನ ಮತ್ತು ಕೈಗಾರಿಕೆಗಳು, ಉದ್ಯಾನವನ, ಮ್ಯೂಸಿಯಂ, ಪ್ರಖ್ಯಾತ ವ್ಯಕ್ತಿಗಳು ಹುಟ್ಟಿದ ಊರುಗಳು ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದರು.
ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮವನ್ನು, ಈ ವರ್ಷ ಮತ್ತೆ ಆರಂಭಿಸಲಾಗಿದೆ. ಪ್ರತಿ ತಾಲೂಕಿನಿಂದ ನಾಲ್ಕು ದಿನಗಳ ಪ್ರವಾಸಕ್ಕೆ ಒಂದು ಬಸ್ ಸೌಲಭ್ಯ ಕಲ್ಪಿಸಲಾಗಿದ್ದು, 50 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ತೆರಳಿದ್ದಾರೆ ಎಂದು ಶಿಕ್ಷಣ ಸಂಯೋಜಕ ರಾಧಾಕೃಷ್ಣ ತಿಳಿಸಿದರು.
ಶಿಕ್ಷಣ ಸಂಯೋಜಕರಾದ ಕೆ.ಬಿ.ರಾಧಾಕೃಷ್ಣ, ಎಚ್.ಆರ್ ಶೇಖರ್, ಪ್ರವಾಸದ ಜಿಲ್ಲಾ ನೋಡಲ್ ಅಧಿಕಾರಿ ವೆಂಕಟೇಶ್, ಮಾರ್ಗದರ್ಶಕರಾದ ಮಹೇಶ್, ಚನ್ನರಸ, ಪ್ರವಾಸ ಮಾರ್ಗದರ್ಶಿ ಶಿಕ್ಷಕರು ಸೇರಿದಂತೆ ವಿವಿಧ ಶಾಲಾ ಶಿಕ್ಷಕರು ಇದ್ದರು.
ಮಕ್ಕಳು 4 ದಿನಗಳ ಕಾಲದ ಪ್ರವಾಸಕ್ಕೆ ಖುಷಿಯಿಂದ ತೆರಳಿದರು. ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಪ್ರವಾಸಕ್ಕೆ ಶುಭ ಕೋರಿದರು.
ಕರ್ನಾಟಕ ದರ್ಶನ ಪ್ರವಾಸ ಕುರಿತು ಮಾಹಿತಿ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್,
ಮಕ್ಕಳಲ್ಲಿ ಶೈಕ್ಷಣಿಕ ಜೀವನ ರೂಪಿಸಿಕೊಳ್ಳುವ ಮಾರ್ಗದರ್ಶನ ಸಿಗುವ ನಿಟ್ಟಿನಲ್ಲಿ ರಾಜ್ಯದ ಶೈಕ್ಷಣಿಕ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಸ್ಥಳ ವಿಕ್ಷಣೆ ಮಾಡಲು ಅವಕಾಶ ನೀಡಲಾಗಿದೆ ಎಂದರು.
ಕುಶಾಲನಗರದಿಂದ ಮೂರು ಬಸ್ಸಿನಲ್ಲಿ 150 ಮಕ್ಕಳು ಹಾಗೂ ಸೋಮವಾರಪೇಟೆಯಿಂದ ಎರಡು ಬಸ್ಸಿನಲ್ಲಿ 100 ಮಕ್ಕಳು ಸೇರಿದಂತೆ ಸೋಮವಾರಪೇಟೆ ತಾಲ್ಲೂಕು ಬಿಇಓ ಕಛೇರಿ ಮೂಲಕ ಒಟ್ಟು 250 ವಿದ್ಯಾರ್ಥಿಗಳು ಕರ್ನಾಟಕ ದರ್ಶನ ಪ್ರವಾಸಕ್ಕೆ ತೆರಳಿದ್ದಾರೆ ಎಂದರು.
ಪ್ರವಾಸಿ ವೀಕ್ಷಣೆ ಸ್ಥಳಗಳು:
ವಿದ್ಯಾರ್ಥಿಗಳ 4 ದಿನಗಳ ಕಾಲದ ಪ್ರವಾಸದ ವೀಕ್ಷಣೆ ಸ್ಥಳಗಳು:
1 ನೇ ದಿನ : ಬೇಲೂರು,ಹಳೇಬೀಡು, ಶ್ರವಣಬೆಳಗೊಳ( ವಾಸ್ತವ್ಯ)
2 ನೇ ದಿನ : ಚಿತ್ರದುರ್ಗ & ಟಿ.ಬಿ.ಡ್ಯಾಂ( ವಾಸ್ತವ್ಯ)
3 ನೇ ದಿನ : ಹಂಪಿ & ಸುತ್ತಮುತ್ತ & ಐಹೊಳೆ ( ವಾಸ್ತವ್ಯ)
4 ನೇ ದಿನ : ಪಟ್ಟದಕಲ್ಲು, ಬಾದಾಮಿ & ಮಹಾಕೂಟ ವೀಕ್ಷಣೆ ನಂತರ ಭಾನುವಾರ ರಾತ್ರಿ ಮರಳಿ ಸೋಮವಾರ ಬೆಳಿಗ್ಗೆ 6 ಗಂಟೆಗೆ ಜಿಲ್ಲೆಗೆ ಹಿಂತಿರುಗುವುದು.