ವಿರಾಜಪೇಟೆ ಫೆ.24 : ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆಗಳ ಪುನಶ್ಚೇತನಗೊಳಿಸುವ ಕಾರ್ಯ ಯಶಸ್ವಿಯಾಗಿರುವುದರಿಂದ ರಾಜ್ಯ ಸರಕಾರ ಮೆಚ್ಚುಗೆ ವ್ಯಕ್ತಪಡಿಸಿದ ಹಿನ್ನಲೆ ಜನರಿಗೆ ನೀರಿನ ಸಮಸ್ಯೆಯಾಗದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯು ಹಳೆಯ ಕೆರೆಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಲೀಲಾವತಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಶಿವಕೇರಿಯಲ್ಲಿರುವ ಅಕ್ಕಚ್ಚಮ್ಮನ ಕೆರೆಯ ಅಭಿವೃದ್ಧಿ ”454 ನೇ ನಮ್ಮೂರ ನಮ್ಮ ಕೆರೆ” ಪುನಶ್ಚೇತನಗೊಳಿಸುವ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಡಾ. ಡಿ.ವಿರೇಂದ್ರ ಹೆಗ್ಗಡೆಯವರು ಈ ಹಿಂದೆ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ್ದರು. ಅಂದಿನಿಂದಲು ರಾಜ್ಯದ ಎಲ್ಲೆಡೆ ಕೆರೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಸುಮಾರು 46 ವರ್ಷಗಳಿಂದ 150ಕ್ಕೂ ಹೆಚ್ಚು ಯೋಜನೆಗಳನ್ನು ಪ್ರಾರಂಭಿಸಿ ಭತ್ತ ಬೆಳೆಯುವ ಯಂತ್ರದ ಉಪಕರಣಗಳು, ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ವಿದ್ಯಾರ್ಥಿವೇತನ, ಸರಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದಲ್ಲಿ ಸಹಾಯ, ದೇವಸ್ಥಾನ ಜೀರ್ಣೋದ್ದಾರ, ಹಿಂದೂ ರುದ್ರಭೂಮಿ ಅಭಿವೃದ್ಧಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಗ್ರಾಮಾಭಿವೃದ್ಧಿ ಯೋಜನೆ ನೀಡಲಾಗುತ್ತಿದೆ ಎಂದು ಲೀಲಾವತಿ ತಿಳಿಸಿದರು.
ವಿರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಬಿ.ಎಸ್.ಶಿವರುದ್ರ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯದ ಎಲ್ಲಾ ಊರುಗಳಲ್ಲಿ ಸ್ವ ಸಹಾಯ ಸಂಘದ ಮೂಲಕ ಮಹಿಳೆಯರಿಗೆ ಶಕ್ತಿ ತುಂಬುವ ಮೂಲಕ ಅವರ ಸಮಸ್ಯೆಗಳನ್ನು ಬಗೆಹರಿಸಿ ಸರಕಾರದಂತೆಯೇ ಗ್ರಾಮಾಭಿವೃದ್ಧಿ ಯೋಜನೆ ಸೌಲಭ್ಯ ನೀಡುತ್ತಿರುವುದನ್ನು ಜನರು ಸದುಪಯೋಗ ಪಡಿಸಿಕೊಳುವಂತಾಗಬೇಕು, ಗ್ರಾಮಗಳಲ್ಲಿ ಸಮಸ್ಯೆಗಳಿದ್ದಲ್ಲಿ ದೂರವಾಣಿ ಮೂಲಕ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ ಸದಾ ನಮ್ಮ ಸಹಕಾರ ಇರುವುದಾಗಿ ತಿಳಿಸಿದರು.
ಯೋಜನೆಯ ಜಿಲ್ಲಾ ಜನ ಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಬಾನಂಗಡ ಅರುಣ್ ಕುಮಾರ್ ಅವರು 454ನೇ ನಮ್ಮೂರ ನಮ್ಮ ಕೆರೆ ಪುನಶ್ಚೇತನಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿ ಈಗಾಗಲೇ ನಗರದ ಸುಂಕದ ಕಟ್ಟೆಯಲ್ಲಿ ಪಂಪ್‍ಕೆರೆ ಅಭಿವೃದ್ಧಿಗೊಳಿಸಲಾಗಿದ್ದು ಅಕ್ಕಚ್ಚಮ್ಮನ ಕೆರೆ ಅಬಿವೃದ್ಧಿ ನಂತರ ಸ್ಥಳಿಯರು ಇದರ ಸ್ವಚ್ಚತೆ ಕಾಪಾಡುವ ಮೂಲಕ ಕೆರೆಯ ಬಗ್ಗೆ ನಿಗಾ ವಹಿಸಬೇಕು ಎಂದರು.
ಪುರಸಭೆಯ ಅಭಿಯಂತರ ಹೇಮ್ ಕುಮರ್ ಮಾತನಾಡಿ, ಕೆರೆ ಅಭಿವೃದ್ಧಿ ಕಾರ್ಯಕ್ಕೆ ಪುರಸಭೆಯಿಂದ ಎಲ್ಲಾ ಸಹಕಾರ ನೀಡುವುದಾಗಿ ಹೇಳಿದರು.
ಅಕ್ಕಚ್ಚಮ್ಮನ ಕೆರೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಕೆ.ಸತೀಶ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರಿಗೆ ಅನುಕೂಲವಾಗುವಂತ ಈ ಕೆರೆ ಐತಿಹಾಸಿಕ ಕೆರೆಯಾಗಿದೆ. ನಾನು ಪಟ್ಟಣ ಪಂಚಾಯಿತಿ ಅಧ್ಯಕ್ಷನಾಗಿದ್ದ ಸಂದರ್ಭ ಸಣ್ಣ ಅನುದಾನ ನೀಡಿ ಈ ಹಿಂದೆ ಸ್ವಚ್ಚತೆ ಗೊಳಿಸಲಾಗಿತ್ತು ಈಗ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಭಿವೃದ್ಧಿ ಕೈಗೊಂಡಿರುವುದು ಉತ್ತಮ ಕಾರ್ಯ ಎಂದರು.
ವೇದಿಕೆಯಲ್ಲಿ ಪುರಸಭೆಯ ಆರೋಗ್ಯಧಿಕಾರಿ ಕೋಮಲ, ಸ್ಥಳಿಯ ಸದಸ್ಯೆ ಹೆಚ್.ಎಂ.ಪೂರ್ಣಿಮಾ, ಪ್ರಗತಿಬಂಧು ಸ್ವ ಸಹಾಯಗಳ ಒಕ್ಕೂಟದ ಅಧ್ಯಕ್ಷೆ ವಿಮಲ ಉಪಸ್ಥಿತರಿದ್ದರು.
ಮಡಿಕೇರಿ ಮತ್ತು ವಿರಾಜಪೇಟೆ ತಾಲೂಕಿನ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಬಿ.ದಿನೇಶ್, ಯೋಜನೆಯ ಕೃಷಿ ಅಧಿಕಾರಿ ರಾಮ್ ಕುಮಾರ್, ಮೇಲ್ವಿ ಚಾರಕ ಹೆಚ್.ಆರ್.ನಾಗರಾಜ್ ಸೇರಿದಂತೆ. ಕಾರ್ಯಕ್ರಮದಲ್ಲಿ ಸ್ವ ಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.