ಮಡಿಕೇರಿ ಮಾ.1 : ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಡವರ ತಾಳ್ಮೆ ಪರೀಕ್ಷೆ ಮಾಡುತ್ತಿದೆ ಎಂದು ಜಾತ್ಯತೀತ ಜನತಾದಳದ ಪರಿಶಿಷ್ಟ ಘಟಕದ ಕಾರ್ಯದರ್ಶಿ ಹೆಚ್.ಎನ್.ಯೋಗೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಡುಗೆ ಅನಿಲದ ಬೆಲೆ ರೂ.50 ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ಗೆ ಏಕಾಏಕಿ ರೂ.350 ಹೆಚ್ಚಳ ಮಾಡಿರುವುದು ಖಂಡನೀಯವೆoದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಬೆಲೆ ಏರಿಕೆಯನ್ನು ನಿಯಂತ್ರಿಸಬೇಕೆoದು ಒತ್ತಾಯಿಸಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿoದ ಬೆಲೆ ಏರಿಕೆಯಾಗುತ್ತಲೇ ಇದೆ. ಬಡವರ ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು ಸರ್ಕಾರ ಮಾಡುತ್ತಲೇ ಇದೆ. ಬಡವರು ಹಾಗೂ ಕೂಲಿ ಕಾರ್ಮಿಕರು ಅಡುಗೆ ಅನಿಲದ ಸಿಲಿಂಡರ್ ಖರೀದಿಸಲಾಗದೆ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ದುಬಾರಿ ತೆರಿಗೆ, ಇತರ ವಸ್ತುಗಳು ಮತ್ತು ಶುಲ್ಕಗಳ ಏರಿಕೆಯಿಂದ ಮೊದಲೇ ನಷ್ಟ ಅನುಭವಿಸುತ್ತಿರುವ ಹೊಟೇಲ್ ಮಾಲೀಕರುಗಳು ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ದುಬಾರಿ ದರದಿಂದ ಬೇಸತ್ತಿದ್ದಾರೆ.
ಸರ್ಕಾರದ ವಿರುದ್ಧ ಮಹಿಳೆಯರು ಸಹನೆ ಕಳೆದುಕೊಂಡು ಬೀದಿಗಳಿದು ಹೋರಾಟ ನಡೆಸುವ ಕಾಲ ದೂರವಿಲ್ಲ. ಹೊಟೇಲ್ ಮಾಲೀಕರುಗಳು ಬೆಲೆ ಏರಿಕೆ ವಿರುದ್ಧ ಹೋರಾಟ ನಡೆಸಿದರೆ ಸಂಪೂರ್ಣ ಬೆಂಬಲ ನೀಡುವುದಾಗಿ ಯೋಗೇಶ್ ಕುಮಾರ್ ತಿಳಿಸಿದ್ದಾರೆ.










