ನಾಪೋಕ್ಲು ಮಾ.4 : ಮಡಿಕೇರಿ ತಾಲ್ಲೂಕಿನ ಪೆರಾಜೆ ಗ್ರಾಮದ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನೀಲೇಶ್ವರ ಕ್ಷೇತ್ರದ ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತಾಯ ಪದ್ಮನಾಭ ತಂತ್ರಿ ಧಾರ್ಮಿಕ ಉಪನ್ಯಾಸ ನೀಡಿ, ಕೇರಳಕ್ಕೂ ಕೊಡಗಿಗೂ ಅವಿನಾಭಾವ ಸಂಬಂಧವಿದೆ. ನೆರೆಯ ಕೇರಳ ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಹಾಗೂ ಕೊಡಗಿನ ಕೆಲವೊಂದು ಭಾಗದಲ್ಲಿ ಆರಾಧಿಸಲ್ಪಡುವ ವಯ ನಾಟ್ ಕುಲವನ್ ದೈವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದರು.
ವಿವಿಧೆಡೆ ಧಾರ್ಮಿಕ ಆಚಾರದಲ್ಲಿ ಭಿನ್ನತೆ ಇದೆ. ವೈವಿಧ್ಯತೆ ಎಂಬುದು ಪ್ರಕೃತಿ ನಿಯಮ. ಭಗವಂತನ ವಿರಾಟ್ ಸ್ವರೂಪವನ್ನು ಹುಡುಕಿಕೊಂಡು ಹೋಗಲು ಯಾರಿಂದಲೂ ಸಾಧ್ಯವಿಲ್ಲ. ಭರತ ಖಂಡದ 64 ಕ್ಷೇತ್ರಕಲೆಗಳು ಸಂಯೋಜನೆಗೊಂಡಾಗ ಮಾತ್ರ ಇಂತಹ ದೇವತಾ ಕಾರ್ಯಗಳು ಪರಿಪೂರ್ಣವಾಗಲು ಸಾಧ್ಯ ಎಂದರು.
ಭಾರತೀಯ ಸಂಸ್ಕೃತಿಯಲ್ಲಿರುವ ಶಾಸ್ತ್ರಗಳನ್ನು ಆವಿಷ್ಕಾರ ಹಾಗೂ ಉಪಾಸನೆ ಮಾಡಿದಾಗ ಮಾತ್ರ ಭಾರತೀಯ ಸಂಸ್ಕೃತಿಯ ಅನಾವರಣವಾಗುತ್ತದೆ. ಇದರಿಂದಾಗಿ ದೈವಂ ಕಟ್ಟು ಮಹೋತ್ಸವಗಳು ಧಾರ್ಮಿಕತೆ ಮತ್ತು ಧರ್ಮವನ್ನು ಬೆಳಗಿಸುತ್ತವೆ ಎಂದರು.
ದೈವಂ ಕಟ್ಟು ಮಹೋತ್ಸವ ಸಮಿತಿಯ ಅಧ್ಯಕ್ಷ ಹೊನ್ನಪ್ಪ ಕೊಳಂಗಾಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಗ್ರಾ.ಪಂ ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ, ಶ್ರೀ ಶಾಸ್ತ್ರವು ದೇವಸ್ಥಾನ ಹಾಗೂ ದೈವಂ ಕಟ್ಟು ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಜಿತೇಂದ್ರ ನಿಡ್ಯಮಲೆ, ಶ್ರೀ ವಯನಾಟ್ ಕುಲವನ್ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ, ಕುತ್ತಿಕೋಲು ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ದೇವತಕ್ಕರಾದ ರಾಜಗೋಪಾಲ ರಾಮಕಜೆ, ಭಗವತಿ ಕ್ಷೇತ್ರದ ಅಧ್ಯಕ್ಷ ಕುಂಞಿಕಣ್ಣ ಬೇಡಗಂ, ಭಗವತಿ ತಂಬುರಾಟಿ ಕ್ಷೇತ್ರದ ಸ್ಥಾನಿಕರಾದ ಸತ್ಯಂ ಕಾರ್ನೋಚನ್, ದೈವಂ ಕಟ್ಟು ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪವಿತ್ರನ್ ಗುಂಡ್ಯ ಉಪಸ್ಥಿತರಿದ್ದರು.
ಜಾತ್ರಾ ಮಹೋತ್ಸವದ ಅಂಗವಾಗಿ ಪೆರಾಜೆಯ ಶ್ರೀ ಶಾಸ್ತವ ದೇವಸ್ಥಾನದಿಂದ ಬೆಳಿಗ್ಗೆ ಹಸಿರು ವಾಣಿ ಮೆರವಣಿಗೆ ನಡೆಯಿತು. ಬಳಿಕ ಉಗ್ರ ತುಂಬ ಕಾರ್ಯಕ್ರಮ ನಡೆಯಿತು. ಸಂಜೆ ದೈವಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ವರದಿ : ದುಗ್ಗಳ ಸದಾನಂದ.









