ಮಡಿಕೇರಿ ಮಾ.8 : ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಕೊಡಗಿನ ಮೂವರು ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಗೋಣಿಕೊಪ್ಪ ಹಾಗೂ ಕದನೂರು ಗ್ರಾಮಗಳ ನಿವಾಸಿಗಳಾದ ಪಾಲೆಕಂಡ ಬೆಳ್ಳಿಯಪ್ಪ ಹಾಗೂ ಪಾಲೆಕಂಡ ಬೋಯ್ಯ ಸಹೋದರರು, ತಮ್ಮ ಹಿರಿಯ ವಯಸ್ಸಿನಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದು, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮಾಸ್ಟರ್ ಗೇಮ್ಸ್ ಚಾಂಪಿಯನ್‍ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
86 ವರ್ಷದ ಬೆಳ್ಳಿಯಪ್ಪ ಹಾಗೂ 95 ವಯಸ್ಸಿನ ಬೋಪಯ್ಯ ಅವರುಗಳು, ಸಕ್ರಿಯ ಕ್ರೀಡಾಪಟುಗಳಾಗಿದ್ದು, ಭಾರತದಾದ್ಯಂತ ಆಯೋಜನೆಗೊಂಡ ಮಾಸ್ಟರ್ಸ್ ಗೇಮ್ಸ್ ಕ್ರೀಡಾಕೂಟದಲ್ಲಿ 13 ಪದಕಗಳನ್ನು ಗೆದ್ದಿದ್ದಾರೆ. ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾ.10 ರಿಂದ 15ರ ವರೆಗೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕ್ರೀಡಾಕೂಟ ನಡೆಯಲಿದ್ದು, ಈಗಾಗಲೇ ಇವರಿಬ್ಬರು ವಿದೇಶಕ್ಕೆ ತೆರಳಿದ್ದಾರೆ. ಬೋಪಯ್ಯ ಅವರು ಜಾವಲಿನ್ ಥ್ರೋ, ಡಿಸ್‍ಕಸ್ ಥ್ರೋ ಹಾಗೂ ಶಾಟ್‍ಪುಟ್ ಕ್ರೀಡೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳ್ಳಿಯಪ್ಪ ಅವರು 100, 200 ಹಾಗೂ 1,500 ಮೀಟರ್ ವಾಕಿಂಗ್ ರೇಸ್‍ನಲ್ಲಿ ಭಾಗವಹಿಲಿದ್ದಾರೆ.
ಇವರೊಂದಿಗೆ ಹುದಿಕೇರಿಯ ನಿವಾಸಿ, ಕರ್ನಾಟಕ ಮಾಸ್ಟರ್ಸ್ ಕ್ರೀಡಾಕೂಟ ಸಂಘದ ಅಧ್ಯಕ್ಷೆಯಾಗಿರುವ ಮಾಚಮ್ಮ (77) ಅವರು ಸಿಡ್ನಿಗೆ ತೆರಳಿದ್ದು, ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.