ವಿರಾಜಪೇಟೆ ಮಾ.9 : ಪುರಸಭೆ ವಿರೋಧ ಪಕ್ಷದ ಸದಸ್ಯರಿಗೆ ಅಭಿವೃದ್ದಿ ಕಾರ್ಯ ಬೇಕಾಗಿಲ್ಲ. ಕಾರ್ಯಸೂಚಿಯಲ್ಲಿ ಇಲ್ಲದ ವಿಷಯಗಳನ್ನು ಪ್ರಸ್ತಾಪಿಸಿ ಸಭೆಗೆ ಅಡ್ಡಿ ಪಡಿಸುವುದು ಇವರ ನಿತ್ಯ ಕಾಯಕವಾಗಿದೆ ಎಂದು ಬಿಜೆಪಿ ಸದಸ್ಯ ಸುಭಾಷ್ ಮಹಾದೇವ್ ಆರೋಪಿಸಿದರು.
ವಿರೋಧ ಪಕ್ಷದ ಸದಸ್ಯರ ಹದ್ದು ಮೀರಿದ ವರ್ತನೆಯನ್ನು ತಡೆಯಲು ಸಾಧ್ಯವಿಲ್ಲದೆ ಪುರಸಭೆಯ ಬಜೆಟ್ ಪೂರ್ವಬಾವಿ ಸಭೆಯನ್ನು ಅಧ್ಯಕ್ಷರು ಮುಂದೂಡಿದ ಬಳಿಕ ಮಾತನಾಡಿ, ಕಳೆದ ಸಭೆಯಲ್ಲಿ ನಿರ್ಣಯ ಪುಸ್ತಕದಲ್ಲಿ ಸಹಿ ಮಾಡಿ ಕಾರ್ಯಸೂಚಿಯಲ್ಲಿ ಇಲ್ಲದ ವಿಷಯವನ್ನು ಪ್ರಸ್ತಾಪಿಸಿ ಸಭೆಯಿಂದ ಹೊರನಡೆದರು. ಈ ಬಾರಿ ಕೂಡ ಅದನ್ನೆ ಮಾಡಿದ್ದಾರೆ. ಅಂಗಡಿ ಮಾಲೀಕರು ತಮ್ಮ ಅಂಗಡಿಯ ಮುಂದೆ ದಿನಗಟ್ಟಲೆ ವಾಹನವನ್ನು ತಂದು ನಿಲ್ಲಿಸುತ್ತಿದ್ದಾರೆ. ಗ್ರಾಮೀಣ ಭಾಗದಿಂದ ಬರುವ ಸಾರ್ವಜನಿಕರು ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಪರಿತಪಿಸುತ್ತಿದ್ದಾರೆ. ಪಟ್ಟಣದಲ್ಲಿ ಪೇ ಪಾರ್ಕಿಂಕ್ ಮಾಡಿದರೆ ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗುತ್ತದೆ. ಪುರಸಭೆಗೂ ಆದಾಯ ಬರುತ್ತದೆ. ಇದ್ಯಾವುದಕ್ಕೆ ಅವಕಾಶ ಕೊಡದ ವಿರೋಧ ಪಕ್ಷದವರು ಪ್ರತಿ ಸಭೆಯಲ್ಲಿ ಗದ್ದಲ ಏರ್ಪಡಿಸಿ ಅಭಿವೃದ್ಧಿ ಕಾರ್ಯಗಳಿಗೆ ಕಂಟಕಪ್ರಾಯರಾಗುತ್ತಿದ್ದಾರೆ ಎಂದು ಆರೋಪಿಸಿದರು.
ಸಭೆಗೆ ಗೌರವ ಕೊಡದ ವಿರೋಧ ಪಕ್ಷದ ಸದಸ್ಯರಿಂದ ಸಾರ್ವಜನಿಕರು ಯಾವ ರೀತಿ ಅಭಿವೃದ್ದಿ ಕಾರ್ಯಗಳನ್ನು ನಿರೀಕ್ಷಿಸುವುದು ಎಂದು ಮಾರ್ಮಿಕವಾಗಿ ನುಡಿದರು.
ಇದೇ ಸಂಧರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋಧ, ಸದಸ್ಯರಾದ ಸುನೀತಾ, ಅನಿತಾ, ನಾಮಕರಣ ಸದಸ್ಯರಾದ ಕೂತಂಡ ಸಚಿನ್, ತಸ್ಲಿಂ ಅಕ್ತರ್, ಸುನೀತಾ ಇದ್ದರು.