ಮಡಿಕೇರಿ ಮಾ.9 : ರಾಷ್ಟ್ರೀಯ ಜಂತುಹುಳು ನಿಯಂತ್ರಣ ಕಾರ್ಯಕ್ರಮವು ಜಿಲ್ಲೆಯಲ್ಲಿ ಮಾ.13 ರಂದು ನಡೆಯಲಿದ್ದು, 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಣೆಯ ಆಲ್‍ಬೆಂಡ್‍ಜೋಲ್ ಮಾತ್ರೆ ವಿತರಿಸಬೇಕು. ಅರ್ಹ ಮಕ್ಕಳು ಇದರಿಂದ ಹೊರಗುಳಿಯಬಾರದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಅವರು ಸರ್ಕಾರದ ನಿರ್ದೇಶನದಂತೆ ಕಾರ್ಯಕ್ರಮ ಅನುಷ್ಠಾನಕ್ಕೆ ಕ್ರಮವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಮಾಹಿತಿ ನೀಡಿ ದೇಶದಾದ್ಯಂತ ಮಾರ್ಚ್, 13 ರಂದು “ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮ”(ಎನ್‍ಡಿಡಿ) ಜರುಗಲಿದೆ. ಹಾಗೆಯೇ ಮಾರ್ಚ್, 14 ರಿಂದ 25 ರವರೆಗೆ ಮೋಪ್ ಅಪ್ ಡೇ ಕಾರ್ಯಕ್ರಮ ನಡೆಯುತ್ತಿದ್ದು, 1-19 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಆಲ್‍ಬೆಂಡಜೋಲ್-400 ಎಂ.ಜಿ ಮಾತ್ರೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮದಲ್ಲಿ 1-5 ವರ್ಷದ ಒಳಗಿನ ಮಕ್ಕಳಿಗೆ ಅಂಗನವಾಡಿಗಳಲ್ಲಿ ಮಾತ್ರೆ ನೀಡಲಾಗುತ್ತದೆ. 6-19 ವರ್ಷದ ಮಕ್ಕಳಿಗೆ ಎಲ್ಲಾ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆ ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರೆಗಳನ್ನು ನೀಡಲಾಗುತ್ತದೆ. ಆಶಾ ಕಾರ್ಯಕರ್ತೆಯರು 6-19 ವರ್ಷದ ಒಳಗಿನ ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿಯನ್ನು ತಯಾರಿಸಿ ಅವರಿಗೆ ಅಂಗನವಾಡಿಗಳಲ್ಲಿ ಮಾತ್ರೆ ನೀಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ 1-2 ವರ್ಷದ ಮಕ್ಕಳಿಗೆ ಅರ್ಧ ಆಲ್‍ಬೆಂಡಜೋಲ್ ಮಾತ್ರೆ ಹಾಗೂ 2-19 ವರ್ಷದ ಮಕ್ಕಳಿಗೆ ಒಂದು ಆಲ್‍ಬೆಂಡಜೋಲ್ ಮಾತ್ರೆ ನೀಡಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ವಿವರಿಸಿದರು.
ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ವಿವಿಧ ಇಲಾಖೆಗಳ ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಕಾರ ಅಗತ್ಯ ಎಂದು ಕೋರಿದರು.
::: 1,47,039 ಮಕ್ಕಳಿಗೆ ಮಾತ್ರೆ :::
ಆರ್‍ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಅವರು ಮಾತನಾಡಿ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮಕ್ಕೆ (ಎನ್‍ಡಿಡಿ) ಕೊಡಗು ಜಿಲ್ಲೆಯಲ್ಲಿ 1-19 ವರ್ಷದೊಳಗಿನ ಮಕ್ಕಳ ಗುರಿ 1,47,039 ಹೊಂದಿದ್ದು, ಇದರಲ್ಲಿ ಅಂಗನವಾಡಿ ಮಕ್ಕಳು 29,499, ಅಂಗನವಾಡಿಯಿಂದ ಹೊರಗುಳಿದ ಮಕ್ಕಳು 7,565, ಎಲ್ಲಾ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಯಲ್ಲಿರುವ ಮಕ್ಕಳು 92,873 ಹಾಗೂ ಪದವಿ ಪೂರ್ವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು 15,757 ಹಾಗೆಯೇ ಐಟಿಐ ಮತ್ತು ತಾಂತ್ರಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 1,345 ಮಾತ್ರೆ ವಿತರಿಸಲಾಗುತ್ತದೆ ಎಂದರು.
ಎನ್‍ಡಿಡಿ ಕಾರ್ಯಕ್ರಮಕ್ಕೆ ಅವಶ್ಯಕತೆಯಿರುವ ಆಲ್‍ಬೆಂಡಜೋಲ್ 400 ಎಂ.ಜಿ ಮಾತ್ರೆಗಳನ್ನು ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಖಾಂತರ ಎಲ್ಲಾ ಶಾಲೆ, ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಅನುಷ್ಠಾನಗೊಳಿಸಲು ಎಲ್ಲಾ ಶಾಲೆ/ ಕಾಲೇಜು ನೋಡಲ್ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಎನ್‍ಡಿಡಿ ಕಾರ್ಯಕ್ರಮದ ಬಗ್ಗೆ ತರಬೇತಿ ನೀಡಲಾಗಿದೆ ಎಂದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.