ಮಡಿಕೇರಿ ಮಾ.10 : ಪ್ರತಿ ಚುನಾವಣೆ ಸಂದರ್ಭ ಚುನಾವಣಾ ಆಯೋಗಕ್ಕೆ ತಮ್ಮ ಜನ್ಮ ದಿನಾಂಕದ ಕುರಿತು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಪಿ.ಬಿ.ತಿಮ್ಮಯ್ಯ ಎಂಬುವವರು ವಿರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಿಮ್ಮಯ್ಯ ಅವರು ಶಾಸಕ ಕೆ.ಜಿ.ಬೋಪಯ್ಯ ಅವರು ತಮ್ಮ ಜನ್ಮ ದಿನಾಂಕದ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡುತ್ತಲೇ ಬಂದಿದ್ದಾರೆ ಎಂದು ಆರೋಪಿಸಿದರು.
ಚುನಾವಣಾ ಆಯೋಗ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ವಿರಾಜಪೇಟೆ ಪೊಲೀಸ್ ಠಾಣೆಗೆ ಶಾಸಕರ ವಿರುದ್ಧ ದೂರು ನೀಡಲಾಗಿದೆ. ಸಾಮಾಜಿಕ ಕಳಕಳಿಯ ಚಿಂತನೆಯಡಿ ದೂರು ನೀಡಿದ್ದು, ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲವೆಂದು ಸ್ಪಷ್ಟಪಡಿಸಿದರು.
1979ರಲ್ಲಿ ಬಾರ್ ಕೌನ್ಸಿಲ್ ನಲ್ಲಿ ತಮ್ಮ ಹುಟ್ಟಿದ ದಿನಾಂಕವನ್ನು 1951 ಅಕ್ಟೋಬರ್ 17 ಎಂದು ದಾಖಲಿಸಿರುತ್ತಾರೆ. 2004 ನೇ ಸಾಲಿನ ವಿಧಾನಸಭಾ ಚುನಾವಣೆ ಸಮಯದಲ್ಲಿ ಅವರ ವಯಸ್ಸು ಅವರ ಜನ್ಮ ದಿನಾಂಕದ ಅನುಗುಣವಾಗಿ 53 ವರ್ಷ ಆಗಿರುತ್ತದೆ. ಆದರೆ ಬೋಪಯ್ಯ ಅವರು ತಮ್ಮ ವಯಸ್ಸನ್ನು 49 ವರ್ಷ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. 2013 ನೇ ಸಾಲಿನ ಚುನಾವಣೆಯಲ್ಲಿ ಅವರ ವಯಸ್ಸು ಜನ್ಮ ದಿನಾಂಕಕ್ಕೆ ಅನುಗುಣವಾಗಿ 61 ವರ್ಷ ಆಗಿದೆ. ಆದರೆ ಅವರು ಚುನಾವಣಾ ಆಯೋಗಕ್ಕೆ ನೀಡಿದ ಮಾಹಿತಿಯಲ್ಲಿ 58 ವರ್ಷ ಎಂದು ದಾಖಲಿಸಿದ್ದಾರೆ. ಅಲ್ಲದೆ 2018 ರ ಚುನಾವಣೆಯಲ್ಲಿ ಅವರ ವಯಸ್ಸು 67 ಆಗಿದ್ದು, ಆಯೋಗಕ್ಕೆ 65 ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ತಿಮ್ಮಯ್ಯ ಆರೋಪಿಸಿದರು.
ಚುನಾವಣಾ ಆಯೋಗ ಶಾಸಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.









