ಮಡಿಕೇರಿ ಮಾ.10 : ಕೊಡವ ಹಾಕಿ ಅಕಾಡೆಮಿಯ 2022-23ನೇ ಸಾಲಿನ ಮಹಾಸಭೆಯು ಮಾ.13 ರಂದು ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸರ್ವ ಸದಸ್ಯರು ಸಭೆಗೆ ತಪ್ಪದೆ ಹಾಜರಾಗುವಂತೆ ಅಕಾಡೆಮಿ ಉಪಾಧ್ಯಕ್ಷ ಕುಕ್ಕೇರ ಜಯಾ ಚಿಣ್ಣಪ್ಪ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30 ಗಂಟೆಗೆ ವಿರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಸಂತಾಪ ಸೂಚನೆ, ಕಳೆದ ಮಹಾಸಭೆಯ ವರದಿ ವಾಚನ, ಆಡಳಿತ ಮಂಡಳಿಯ ವರದಿ ವಾಚನ, ಜಮಾ ಖರ್ಚು, ಅಪ್ಪಚಟ್ಟೋಳಂಡ ಹಾಕಿ ಉತ್ಸವಕ್ಕೆ ಬೆಂಬಲ ಸೂಚಿಸುವುದು ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ದಿ.ಪಾಂಡಂಡ ಕುಟ್ಟಪ್ಪ (ಕುಟ್ಟಣಿ) ಅವರು 1997ರಲ್ಲಿ ಅಕಾಡೆಮಿಯನ್ನು ಪ್ರಾರಂಭಿಸಿದ್ದು, ಪ್ರಸ್ತುತ 406 ಕುಟುಂಬಗಳು ಸದಸ್ಯತ್ವ ಪಡೆದುಕೊಂಡಿವೆ. ಹೆಚ್ಚಿನ ಮಾಹಿತಿಗೆ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ 9110808009 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
::: ಹಾಕಿ ಉತ್ಸವ :::
23ನೇ ವರ್ಷದ ಕೊಡವ ಕುಟುಂಬಗಳ ನಡುವಣ ಪ್ರತಿಷ್ಠಿತ ಕೌಟುಂಬಿಕ ಕೊಡವ ಹಾಕಿ ಉತ್ಸವ ನಾಪೋಕ್ಲುವಿನಲ್ಲಿ `ಅಪ್ಪಚೆಟ್ಟೋಳಂಡ’ ಕುಟುಂಬದ ಪ್ರಾಯೋಜಕತ್ವದಲ್ಲಿ ಮಾ.18 ರಿಂದ ಏ.9ರ ವರೆಗೆ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ.
ಈಗಾಗಲೇ 336 ತಂಡಗಳು ನೋಂದಾಯಿಸಿಕೊಂಡಿದ್ದು, ತಂಡಗಳ ನೋಂದಾವಣಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆಸಕ್ತ ಕೊಡವ ತಂಡಗಳು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಜಯಾ ಚಿಣ್ಣಪ್ಪ ಮಾಹಿತಿ ನೀಡಿದರು.
ವಿಜೇತ ತಂಡಕ್ಕೆ ಅಕಾಡೆಮಿ ವತಿಯಿಂದ ಇದೇ ಪ್ರಥಮ ಬಾರಿಗೆ ಬೆಳ್ಳಿಯ ರೋಲಿಂಗ್ ಟ್ರೋಫಿ ನೀಡಲಾಗುವುದು. ಕೊಡಗಿನ ಜನತೆ ಹೆಚ್ಚಿನ ಸಂಖೆಯಲ್ಲಿ ಆಗಮಿಸಿ ಹಾಕಿ ಉತ್ಸವವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ನಿರ್ದೇಶಕರಾದ ಚೆಯ್ಯಂಡ ಸತ್ಯ ಹಾಗೂ ಕಂಬೀರಂಡ ರಾಖಿ ಪೂವಣ್ಣ ಉಪಸ್ಥಿತರಿದ್ದರು.








