ಕುಶಾಲನಗರ, ಮಾ.10: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಜನಜಾಗೃತಿ ವೇದಿಕೆಗಳ ಮೂಲಕ ಸಮಾಜದಲ್ಲಿ ಬೃಹತ್ ಬದಲಾವಣೆ ಕಂಡು ಬಂದಿದೆ ಎಂದು ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯಸ್ ತಿಳಿಸಿದ್ದಾರೆ.
ಕುಶಾಲನಗರದಲ್ಲಿ ನಡೆದ ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಸಭೆಯಲ್ಲಿ 2022-23 ನೇ ವರ್ಷದ ಕ್ರಿಯಾಯೋಜನೆಯ ಮತ್ತು ಅನುದಾನದ ಕುರಿತು ಮಾಹಿತಿ ನೀಡಿ ಮಾತನಾಡಿದರು.
ಮಧ್ಯವರ್ಜನ ಶಿಬಿರಗಳ ಮೂಲಕ ಲಕ್ಷಾಂತರ ಸಂಖ್ಯೆಯ ಮದ್ಯ ವ್ಯಸನಿಗಳನ್ನು ಪಾನಮುಕ್ತರಾಗಿಸುವುದರೊಂದಿಗೆ ಶಾಶ್ವತ ಪರಿಹಾರ ಶಿಬಿರಗಳ ಮೂಲಕ ಲಭಿಸಿದೆ. ವಲಯಕ್ಕೊಂದು ನವ ಜೀವನ ಸಮಿತಿ ನಿರ್ಮಾಣ ಮಾಡುವುದರೊಂದಿಗೆ ಸ್ವಾಸ್ಥ್ಯ ಸಮಾಜ ನಿರ್ಮಾಣದ ಕಲ್ಪನೆ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಮೂಲಕ ಆಗಲಿದೆ ಎಂದರು.
ಎಲ್ಲಾ ವಲಯ ಹಂತಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಜನರ ಮತ್ತು ಗ್ರಾಮಗಳ ಅಭಿವೃದ್ಧಿಗೆ ಕ್ರಿಯಾಯೋಜನೆ, ಶಿಬಿರಗಳು ನಡೆಯಲಿವೆ ಎಂದು ತಿಳಿಸಿದರು.
ಜನಜಾಗೃತಿ ವೇದಿಕೆಯ ಕೊಡಗು ಜಿಲ್ಲಾ ವ್ಯಾಪ್ತಿಯ ಸಮಗ್ರ ವರದಿಯನ್ನು ಅರಕಲಗೂಡು ಪಿರಿಯಾಪಟ್ಟಣ, ಸೋಮವಾರಪೇಟೆ, ಮತ್ತಿತರ ವ್ಯಾಪ್ತಿಯ ಯೋಜನೆ ಅಧಿಕಾರಿಗಳು ನೀಡಿದರು.
ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಪಾಯಸ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಹೊನ್ನವಳ್ಳಿ ಸತೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜನಜಾಗೃತಿ ವೇದಿಕೆಯ ಕೊಡಗು ಜಿಲ್ಲಾ ನೂತನ ಅಧ್ಯಕ್ಷರಾಗಿ ಸೋಮವಾರಪೇಟೆಯ ಹಿರಿಯ ವಕೀಲ ಪಿ ಅಭಿಮನ್ಯು ಕುಮಾರ್, ಉಪಾಧ್ಯಕ್ಷರಾಗಿ ರಂಗಸ್ವಾಮಿ ಆಯ್ಕೆಯಾದರು.
ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷ ಪಿ.ಅಭಿಮನ್ಯು ಕುಮಾರ್ ಜನ ಜಾಗೃತಿ ವೇದಿಕೆಯ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಮಾಹಿತಿ ಒದಗಿಸಿದರು. ಮುಂಬರುವ ಚುನಾವಣೆ ಮದ್ಯ ಮುಕ್ತವಾಗುವಂತೆ ಪ್ರತಿಯೊಬ್ಬರು ಜಾಗೃತರಾಗಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಭ್ಯರ್ಥಿಗಳು ಮತಕ್ಕಾಗಿ ಮದ್ಯ ಮತ್ತಿತರ ಅಮಿಷಗಳನ್ನು ಒಡ್ಡದಂತೆ ಸಮಿತಿಯ ಪ್ರಮುಖರು ಗಮನಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಕೊಡಗು ಜಿಲ್ಲಾ ಕಾರ್ಯದರ್ಶಿ ಲೀಲಾವತಿ, ಜನ ಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಬಾನಂಗಡ ಅರುಣ್, ವೇದಿಕೆಯ ಸದಸ್ಯರು, ಯೋಜನಾಧಿಕಾರಿಗಳು ಇದ್ದರು.









