ಮಡಿಕೇರಿ ಮಾ.10 : ಮೂರು ವರ್ಷಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಮಹಾಮಳೆ ಹಾನಿಯಿಂದ ಮನೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ನೆಲ್ಯಹುದಿಕೇರಿಯ ನಲ್ವತ್ತುಎಕರೆ ಗ್ರಾಮದಲ್ಲಿ ಪೀಪಲ್ಸ್ ಫೌಂಡೇಷನ್ ವತಿಯಿಂದ 25 ಮನೆಗಳನ್ನು ನಿರ್ಮಿಸಲಾಗಿದೆ. ಇದರ ಹಸ್ತಾಂತರ ಕಾರ್ಯಕ್ರಮ ಮಾ.13 ರಂದು ನಡೆಯಲಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್‍ನ ವಲಯ ಸಂಚಾಲಕರು ಹಾಗೂ ಯೋಜನೆಯ ವಲಯ ಮೇಲ್ವಿಚಾರಕರಾದ ಯು. ಅಬ್ದುಸ್ಸಲಾಮ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮಾಅತೆ ಇಸ್ಲಾಮಿ ಹಿಂದ್‍ನ ಅಧೀನ ಸಂಸ್ಥೆ ಪೀಪಲ್ಸ್ ಫೌಂಡೇಶನ್ ಮೂಲಕ ಸುಮಾರು 6 ಲಕ್ಷ ವೆಚ್ಚದ 25 ಮನೆಗಳ ‘ಪೀಪಲ್ಸ್ ವಿಲೇಜ್ ಕೊಡಗು’ವನ್ನು ಎಂ.ಕೆ. ಅಶ್ರಫ್ ಅವರ ಉಸ್ತುವಾರಿಯಲ್ಲಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಪ್ರತಿ ಮನೆ 500 ಚದರ ಅಡಿ ವಿಸ್ತೀರ್ಣದ್ದಾಗಿದ್ದು, 3.50 ಸೆಂಟ್ಸ್ ಜಾಗವನ್ನು ಹೊಂದಿದೆ. ಈ ಮನೆಗಳನ್ನು ಜಾತಿ ಮತ ಭೇದವಿಲ್ಲದೆ ಎಲ್ಲಾ ಸಮುದಾಯಕ್ಕೆ ಸೇರಿದ ಸಂತ್ರಸ್ತ ಕುಟುಂಬಗಳಿಗೆ ವಿತರಿಸಲಾಗುವುದೆಂದು ಹೇಳಿದರು.
ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ ಸಂಕಷ್ಟಗಳು ತಲೆದೋರಿ ಮನೆಗಳನ್ನು ಕಳೆದುಕೊಂಡು ಹಲವರು ನಿರಾಶ್ರಿತರಾದ ಸಂದರ್ಭ ಜಮಾಅತೆ ಇಸ್ಲಾಮೀ ಹಿಂದ್ ಕೊಡಗು ಜಿಲ್ಲೆ, ಹೆಚ್.ಆರ್.ಎಸ್ ಕರ್ನಾಟಕ ಹಾಗೂ ಕೊಡಗು ರಿಲೀಫ್ ಸೆಲ್ ಸಂಯುಕ್ತವಾಗಿ ವಸತಿ ಯೋಜನೆ ರೂಪಿಸಿದವು. ಕೇರಳ ರಾಜ್ಯದ ಉದ್ಯಮಿ ಅಬ್ದುಲ್ ಅವರಿಗೆ ಈ ವಿಚಾರ ತಿಳಿಸಿದ ಸಂದರ್ಭ ಅವರು, ನಲ್ವತ್ತೇಕರೆ ಪ್ರದೇಶದಲ್ಲಿ ಎರಡು ಏಕರೆ ಜಮೀನನ್ನು ಮನೆ ನಿರ್ಮಾಣಕ್ಕಾಗಿ ಖರೀದಿಸಿ, ಸಂಸ್ಥೆಗೆ ಉದಾರವಾಗಿ ನೀಡಿದರು ಎಂದು ಅಬ್ದುಸ್ಸಲಾಮ್ ಸ್ಮರಿಸಿದರು.
ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸಿದ ಬಳಿಕವೂ ಉಳಿದಿರುವ ಜಾಗದಲ್ಲಿ ಸಮುದಾಯ ಭವನ, ಅಂಗನವಾಡಿ, ನ್ಯಾಯ ಬೆಲೆ ಅಂಗಡಿಗಳನ್ನು ನಿರ್ಮಿಸಿ ಅನುಕೂಲ ಕಲ್ಪಿಸಲು ಸಂಸ್ಥೆ ನಿರ್ಧರಿಸಿದೆ ಎಂದರು.
::: ಮನೆಗಳ ಹಸ್ತಾಂತರ :::
ಮಾರ್ಚ್ 13ರಂದು ಸಂಜೆ 4.30 ಗಂಟೆಗೆ ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ಕೇರಳದ ಪೀಪಲ್ಸ್ ಫೌಂಡೇಶನ್ ಅಧ್ಯಕ್ಷ ಎಂ.ಕೆ.ಮುಹಮ್ಮದಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. 25 ಮನೆಗಳನ್ನು ಒಳಗೊಂಡಿರುವ “ಪೀಪಲ್ಸ್ ವಿಲೇಜ್’ನ್ನು ಸಮಾಜದ ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮವನ್ನು ಅರಮೇರಿ ಕಳಂಚೇರಿ ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿ ಉದ್ಘಾಟಿಸಲಿದ್ದಾರೆ. ಶಾಸಕರುಗಳಾದ ಎಂ.ಪಿ.ಅಪ್ಪಚ್ಚುರಂಜನ್, ಯು.ಟಿ.ಖಾದರ್, ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಸಮಾಜ ಸೇವಕ ಎ.ಎಸ್.ಪೊನ್ನಣ್ಣ, ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಬೆಳ್ಗಾಮೀ ಮುಹಮ್ಮದ್ ಸಾದ್, ಕೇರಳ ರಾಜ್ಯಾಧ್ಯಕ್ಷ ಎಂ.ಐ.ಅಬ್ದುಲ್ ಅಝೀಜ್, ಉಪಾಧ್ಯಕ್ಷ ಪಿ.ಮುಜೀಬುರ್ರಹ್ಮಾನ್, ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಾದ ಎಂ.ಹೆಚ್.ಮುಹಮ್ಮದ್ ಕುಂಞ, ಅಕ್ಬರ್ ಅಲಿ ಉಡುಪಿ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
::: ಸಂಸ್ಥೆಯ ಸೇವೆ :::
2019ರ ಮಳೆಗಾಲದಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ಸಿದ್ದಾಪುರ ಸಮೀಪದ ಕರಡಿಗೋಡು-ಹೊಳೆಕರೆ ಪೈಸಾರಿ, ಬೆಟ್ಟದಕಾಡು, ಬರಡಿ, ನೆಲ್ಲಿಹುದಿಕೇರಿ ಮುಂತಾದೆಡೆಗೆ ವ್ಯಾಪಕ ಹಾನಿಗಳು ಸಂಭವಿಸಿ, ಸಾಕಷ್ಟು ಮಂದಿ ತೊಂದರೆಗೆ ಸಿಲುಕಿದ್ದರು. ಈ ಸಂದರ್ಭ ಜಮಾಅತೇ ಇಸ್ಲಾಮಿ ಹಿಂದ್ ಮತ್ತು ಹೆಚ್.ಆರ್.ಎಸ್.ಸ್ವಯಂ ಸೇವಕರು ಸಂತ್ರಸ್ತರಿಗೆ ಅಗತ್ಯ ವೆರವನ್ನು ಒದಗಿಸಿದ್ದರು.
ಸಂಕಷ್ಟದ ಅವಧಿಯಲ್ಲಿ ಹೆಚ್.ಆರ್.ಎಸ್ ತಂಡ ಮನೆ ಕಳೆದುಕೊಂಡವರಿಗೆ 75 ತಾತ್ಕಾಲಿಕ ಬಿಡಾರಗಳಲ್ಲಿ ಆಶ್ರಯ ನೀಡಿದ್ದು ಮಾತ್ರವಲ್ಲ, ಅವರ ಮೂಲ ಅಗತ್ಯಗಳನ್ನು ಪೂರೈಸಿದ್ದರು. ಕೊಡಗು ರಿಲೀಫ್ ಸೆಲ್‍ನ ಕಛೇರಿಯಲ್ಲಿ ಸೂಪರ್ ಮಾರ್ಕೆಟ್ ಹಾಗೂ ಭಾನುವಾರದ ಸಂತೆ ದಿವಸ ಮಹಾ ಸಂತೆಗಳನ್ನು ಏರ್ಪಡಿಸಿ ಉಚಿತವಾಗಿ ಎಲ್ಲಾ ನಿತ್ಯೋಪಯೋಗಿ ವಸ್ತುಗಳನ್ನು ಪೂರೈಸಿದ್ದರು. ಆರೋಗ್ಯ ಕಾಪಾಡುವ ದೃಷ್ಟಿಯಿಂದ ವೈದ್ಯಕೀಯ ಶಿಬಿರವನ್ನು ಏರ್ಪಡಿಸಿ ಸಂತ್ರಸ್ತರಿಗೆ ಯಾವುದರಲ್ಲೂ ಕೊರತೆಯುಂಟಾಗದಂತೆ ನೋಡಿಕೊಂಡಿತ್ತಲ್ಲದೆ, ನೆಲ್ಲಿಹುದಿಕೇರಿಯ ಹಿರಾ ಮಸೀದಿಯ ನೆಲಮಾಳಿಗೆಯನ್ನು ಐವರು ಸಂತ್ರಸ್ತ ಕುಟುಂಬಗಳಿಗೆ ನೀಡಿ ಆಸರೆ ಒದಗಿಸಿತ್ತೆಂದು ಅಬ್ದುಸ್ಸಲಾಮ್ ತಿಳಿಸಿದರು.
2018 ರಲ್ಲಿ ಸಂಭವಿಸಿದ ಭೂ ಕುಸಿತದ ಪ್ರಾಕೃತಿಕ ವಿಕೋಪದ ಸಂದರ್ಭ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದವರಿಗೆ ಕೊಡಗು ರಿಲೀಫ್ ಸೆಲ್ ಮೂಲಕ 8 ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು ಎಂದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಜಮಾಅತೆ ಇಸ್ಲಾಮೀ ಹಿಂದ್‍ನ ಜಿಲ್ಲಾ ಸಂಚಾಲಕರಾದ ಪಿ.ಕೆ.ಅಬ್ದುಲ್ ರೆಹೆಮಾನ್, ಸ್ವಾಗತ ಸಮಿತಿ ಉಪಾಧ್ಯಕ್ಷರುಗಳಾದ ಎನ್.ಕೆ.ವಾಸು, ಜೋಸೆಫ್ ಶ್ಯಾಮ್, ಸದಸ್ಯರುಗಳಾದ ಬಾಬುಚಂದ್ರ ಉಳ್ಳಾಗಡ್ಡಿ ಹಾಗೂ ಬೀರಾನ್ ಕುಟ್ಟಿ ಉಪಸ್ಥಿತರಿದ್ದರು.









