ಮಡಿಕೇರಿ ಮಾ.10 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಇತರೆ ಹಿಂದುಳಿದ ವರ್ಗಗಳ ಘಟಕದ ಕಾರ್ಯಕಾರಿಣಿ ಸಭೆ ಘಟಕದ ಜಿಲ್ಲಾಧ್ಯಕ್ಷ ಬಾನಂಡ ಪ್ರಥ್ಯು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಸಂಘಟಿಸುವಂತೆ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಸಾಧನೆಗಳಾದ ಉಳುವವನಿಗೆ ಭೂಮಿ, ಸೂರು ಇಲ್ಲದವನಿಗೆ ಸೂರು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ತಲುಪಿಸಬೇಕು. ಎಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ದುಡಿದ ಕಾಂಗ್ರೆಸ್ ಪಕ್ಷವನ್ನು ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಿಸಲು ಶ್ರಮವಹಿಸುವಂತೆ ಕರೆ ನೀಡಿದರು.
ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕೊಡಗಿನಲ್ಲಿರುವ 34 ಹಿಂದುಳಿದ ವರ್ಗ, 18 ಉಪ ಜಾತಿಗಳನ್ನು ಮುಖ್ಯವಾಹಿನಿಗೆ ತರಬೇಕು. ಪಕ್ಷದ ಸಾಧನೆ ಮತ್ತು ಕಾಂಗ್ರೆಸ್ ಆಡಳಿತ ನೀಡಿದ ಜನೋಪಯೋಗಿ ಕೊಡುಗೆಗಳನ್ನು ಈ ವರ್ಗಕ್ಕೆ ತಿಳಿಸುವಂತೆ ಹೇಳಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ತೆನ್ನಿರ ಮೈನಾ ಮಾತನಾಡಿ, ಪ್ರತೀ ಬೂತ್‍ಗಳಲ್ಲಿ ಮ್ಯಾಪಿಂಗ್ ನಡೆಸಿ, ಹಿಂದುಳಿದ ವರ್ಗಗಳನ್ನು ಸಂಘಟಿಸಬೇಕು. ಆ ಮೂಲಕ ಕಾಂಗ್ರೆಸ್ ಪಕ್ಷವನ್ನು ಪ್ರಬಲಗೊಳಿಸಬೇಕೆಂದು ತಿಳಿಸಿದರು.
ಮಡಿಕೇರಿ ಬ್ಲಾಕ್ ಸಂಘಟನಾ ಕಾರ್ಯದರ್ಶಿ ರವೂಫ್ ಶೇಕ್ ಮಾತನಾಡಿ, ಮಡಿಕೇರಿಯಲ್ಲಿ ಸಣ್ಣ ಸಣ್ಣ ಹಿಂದುಳಿದ ವರ್ಗಗಳನ್ನು ಗುರುತಿಸಿ ಅವರ ಮುಖಂಡರುಗಳಿಗೆ ಸ್ಥಾನಮಾನ ನೀಡುವಂತೆ ಸಲಹೆ ನೀಡಿದರು.
ಹಿಂದುಳಿದ ವರ್ಗಗಳ ಘಟಕದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಬಾಲಕೃಷ್ಣ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಕೊಟ್ಟಮುಡಿ, ನಗರಸಭೆ ಸದಸ್ಯ ಬಿ.ವೈ.ರಾಜೇಶ್ ಎಲ್ಲಪ್ಪ, ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ಆರು ಬ್ಲಾಕ್‍ಗಳ ಹಿಂದುಳಿದ ವರ್ಗಗಳ ಅಧ್ಯಕ್ಷರು, ಜಿಲ್ಲಾ ಸಮಿತಿ ಸದಸ್ಯರು, ಉಪಾಧ್ಯಕ್ಷರು ಉಪಸ್ಥಿತರಿದ್ದರು.
ಹಿಂದುಳಿದ ವರ್ಗಗಳ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಜಿ.ಇಂದ್ರೇಶ್ ಸ್ವಾಗತಿಸಿ, ಮಡಿಕೇರಿ ಬ್ಲಾಕ್ ಅಧ್ಯಕ್ಷ ಜಿ.ಸಿ.ಜಗದೀಶ್ ವಂದಿಸಿದರು.









