ಕುಶಾಲನಗರ, ಮಾ.11: ಉತ್ತರ ಕೊಡಗಿನ ಗಡಿಭಾಗದ ಶಿರಂಗಾಲ ಗ್ರಾಮದಲ್ಲಿ ದ್ವೈವಾರ್ಷಿಕ
ಮಂಟಿಗಮ್ಮ ದೇವಿಯ ಗ್ರಾಮ ದೇವತೆ ಹಬ್ಬದ ಉತ್ಸವ ಮತ್ತು ಜಾತ್ರೋತ್ಸವವು ಸಂಭ್ರಮ-ಸಡಗರದಿಂದ ನಡೆಯಿತು.
ಪ್ರತಿ ಎರಡು ವರ್ಷಕ್ಕೊಮ್ಮೆ ಜರುಗುವ ಮಂಟಿಗಮ್ಮ ದೇವಿಯ ಉತ್ಸವದಲ್ಲಿ ಭಕ್ತಾದಿಗಳು ಶ್ರದ್ದಾಭಕ್ತಿಯಿಂದ ಪಾಲ್ಗೊಂಡು ದೇವಿಯ ದರ್ಶನ ಪಡೆದರು.
ಹಬ್ಬದ ಪವಿತ್ರ ಬನದಲ್ಲಿ ಶುಕ್ರವಾರ ರಾತ್ರಿಯಿಂದ ಆರಂಭವಾದ ದೇವಿಯ
ವಿವಿಧ ಧಾರ್ಮಿಕ ಕೈಂಕರ್ಯಗಳು ಹಾಗೂ ಪೂಜಾ ಕಾರ್ಯಗಳು ಶನಿವಾರ ಹಗಲಿಡೀ ಜರುಗಿದವು. ಭಕ್ತಾದಿಗಳು ಬನಕ್ಕೆ ತೆರಳಿ ದೇವಿಯ ದರ್ಶನ ಪಡೆದರು.
ಗ್ರಾಮೀಣ ಭಾಗದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ನೂರಾರು ವರ್ಷಗಳ ಇತಿಹಾಸವಿರುವ ಮಂಟಿಗಮ್ಮ ದೇವಿಯ ಉತ್ಸವದಲ್ಲಿ ಕೊಡಗು ಜಿಲ್ಲೆಯ ಗಡಿ ಗ್ರಾಮಗಳ ಜನತೆ ಸೇರಿದಂತೆ ನೆರೆಯ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಗಡಿಭಾಗದ ಗ್ರಾಮಸ್ಥರು ಸೇರಿದಂತೆ ಸಾವಿರಾರು ಮಂದಿ ಭಕ್ತರು ವಿವಿಧೆಡೆಗಳಿಂದ ಆಗಮಿಸಿದ್ದರು. ಶಿರಂಗಾಲ ಗ್ರಾಮದ ಕೋಟೆಯ ಗದ್ದಿಗೆಯಲ್ಲಿ ಶುಕ್ರವಾರ ರಾತ್ರಿ ದೇವಿಗೆ ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ನಂತರ ದೇವಿಯ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಮಂಟಿಗಮ್ಮ ದೇವಿಯನ್ನು ಭಕ್ತಾದಿಗಳು ತಮಟೆ ಮತ್ತು ಮಂಗಳವಾದ್ಯದೊಂದಿಗೆ ದೇವಿಬನಕ್ಕೆ ಮೆರವಣಿಗೆಯಲ್ಲಿ ಸಾಗಿ ಸಂಬಂಧಿಸಿದ ಆರಭರಣಗಳನ್ನೊಳಗೊಂಡ ಬುಟ್ಟಿ ಮತ್ತಿತರರ ಸಾಂಪ್ರದಾಯಿಕ ಸಾಮಾಗ್ರಿಗಳನ್ನು ಕೊಂಡೊಯ್ಯಲಾಯಿತು. ದೇವಿಯ ಬನದಲ್ಲಿ ಶುಕ್ರವಾರ ರಾತ್ರಿ ಹಾಕಿದ್ದ ಅಗ್ನಿಕೊಂಡವನ್ನು ಹರಕೆ ಹೊತ್ತ ಭಕ್ತಾದಿಗಳು ತುಳಿದು ದೇವರ ಕೃಪೆಗೆ ಪಾತ್ರರಾದರು. ಹಬ್ಬದ ಅಂಗವಾಗಿ ಇಡೀ ಗ್ರಾಮವು ತಳಿರುತೋರಣಗಳಿಂದ, ರಂಗವಲ್ಲಿಗಳಿಂದ ಶೃಂಗರಿಸಲ್ಪಟ್ಟಿತ್ತು. ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣವಿದ್ದು ತಮ್ಮ ತಮ್ಮ ಕುಟುಂಬಗಳಿಗೆ ಸಂಬಂಧಿಸಿದ ನೆಂಟರಿಷ್ಟರನ್ನು, ಬಂಧುಗಳನ್ನು ಈ ಜಾತ್ರೆಗೆ ಆಹ್ವಾನಿಸಲಾಯಿತು. ಶಿರಂಗಾಲದ ಸಂತೆಮಾರುಕಟ್ಟೆಯ ಮೈದಾನದಲ್ಲಿ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ನಡೆಯಿತು.
ಈ ಸಂದರ್ಭ ದೇವಿಗೆ ಬೆಳಗ್ಗಿನಿಂದಲೇ ವಿವಿಧ ಹೋಮ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ದೇವಸ್ಥಾನ ಸಮಿತಿ ಅಧ್ಯಕ್ಷ ರುದ್ರಪ್ಪ, ಕಾರ್ಯದರ್ಶಿ ಎಸ್.ವಿ.ಮಹೇಶ್ ಸೇರಿದಂತೆ ಸಮಿತಿಯ ನಿರ್ದೇಶಕರು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.
ಅನ್ನ ಸಂತರ್ಪಣೆ : ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ದಾನಿಗಳ ನೆರವಿನೊಂದಿಗೆ ದೇವಾಲಯ ಸಮಿತಿ ವತಿಯಿಂದ ಬೆಳಿಗ್ಗೆ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಗ್ರಾಮದಲ್ಲಿ ಬೆಳಗ್ಗಿನಿಂದ 2 ದಿನಗಳವರೆಗೆ ಜಾತ್ರೋತ್ಸವವು ನಡೆಯಿತು. ಇದರ ಅಂಗವಾಗಿ ವಿವಿ ಗ್ರಾಮೀಣ ಕ್ರೀಡಾಕೂಟಗಳು ನಡೆದವು.
ಈ ಗ್ರಾಮದಲ್ಲಿ ನಡೆಯುವ ದೇವರ ಉತ್ಸವ ಹಾಗೂ ಜಾತ್ರೋತ್ಸವವು ಭಾವೈಕ್ಯತೆಗೆ ಹೆಸರಾಗಿದ್ದು, ಇತರೆ ಗ್ರಾಮಗಳಿಗೆ ಮಾದರಿ ಎನಿಸಿದೆ.
ರಥೋತ್ಸವ : ಮಾ.13 ರಂದು ಶಿರಂಗಾಲ ಗ್ರಾಮದಲ್ಲಿ ಉಮಾ ಮಹೇಶ್ವರ ವಾರ್ಷಿಕ ರಥೋತ್ಸವ ಜರುಗಲಿದೆ.