ಮಡಿಕೇರಿ ಮಾ.13 : ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೋಮವಾರ ಚಾಲನೆ ನೀಡಿದರು.
ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬಾಕ್ಸಿಂಗ್ ಒಳಾಂಗಣ ಕ್ರೀಡಾಂಗಣದಲ್ಲಿ 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಆಲ್ಬೆಂಡಜೋಲ್ 400 ಎಂ.ಜಿ. ಮಾತ್ರೆ ವಿತರಿಸಿ ಚಾಲನೆ ನೀಡಿದರು.
ಮಕ್ಕಳು ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು. ಆಟವಾಡಿದ ನಂತರ ಸಾಬೂನಿನಿಂದ ಕೈಕಾಲು ತೊಳೆಯಬೇಕು. ರಕ್ತಹೀನತೆ ಮತ್ತು ಅಪೌಷ್ಟಿಕತೆ ತಡೆಯಬೇಕು. ಆರೋಗ್ಯದ ಕಡೆ ಗಮನಹರಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಮಾಹಿತಿ ನೀಡಿ ಮಾರ್ಚ್, 14 ರಿಂದ 25 ರವರೆಗೆ ಮೋಪ್ ಅಪ್ ಡೇ (ಒoಠಿ uಠಿ ಜಚಿಥಿ) ಕಾರ್ಯಕ್ರಮ ನಡೆಯಲಿದ್ದು, 1 ರಿಂದ 19 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಆಲ್ಬೆಂಡಜೋಲ್-400 ಎಂ.ಜಿ ಮಾತ್ರೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮಕ್ಕೆ (ಎನ್ಡಿಡಿ) ಕೊಡಗು ಜಿಲ್ಲೆಯಲ್ಲಿ 1 ರಿಂದ 19 ವರ್ಷದೊಳಗಿನ ಮಕ್ಕಳ ಗುರಿ 1,47,039 ಹೊಂದಿದ್ದು, ಇದರಲ್ಲಿ ಅಂಗನವಾಡಿ ಮಕ್ಕಳು 29,499, ಅಂಗನವಾಡಿಯಿಂದ ಹೊರಗುಳಿದ ಮಕ್ಕಳು 7,565, ಎಲ್ಲಾ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಯಲ್ಲಿರುವ ಮಕ್ಕಳು 92,873 ಹಾಗೂ ಪದವಿ ಪೂರ್ವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು 15,757 ಹಾಗೆಯೇ ಐಟಿಐ ಮತ್ತು ತಾಂತ್ರಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1,345 ವಿದ್ಯಾರ್ಥಿಗಳಿಗೆ ಮಾತ್ರೆ ವಿತರಿಸಲಾಗುತ್ತದೆ ಎಂದರು.
ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಅವರು ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಲ್ಲಿ 1 ರಿಂದ 5 ವರ್ಷದ ಒಳಗಿನ ಮಕ್ಕಳಿಗೆ ಅಂಗನವಾಡಿಗಳಲ್ಲಿ ಮಾತ್ರೆ ನೀಡಲಾಗುತ್ತದೆ. 6 ರಿಂದ 19 ವರ್ಷದ ಮಕ್ಕಳಿಗೆ ಎಲ್ಲಾ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆ ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರೆಗಳನ್ನು ನೀಡಲಾಗುತ್ತದೆ. ಆಶಾ ಕಾರ್ಯಕರ್ತೆಯರು 6-19 ವರ್ಷದ ಒಳಗಿನ ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿಯನ್ನು ತಯಾರಿಸಿ ಅವರಿಗೆ ಅಂಗನವಾಡಿಗಳಲ್ಲಿ ಮಾತ್ರೆ ನೀಡಲಿದ್ದಾರೆ ಎಂದರು.
1-2 ವರ್ಷದ ಮಕ್ಕಳಿಗೆ ಅರ್ಧ ಆಲ್ಬೆಂಡಜೋಲ್ ಮಾತ್ರೆ ಹಾಗೂ 2-19 ವರ್ಷದ ಮಕ್ಕಳಿಗೆ ಒಂದು ಆಲ್ಬೆಂಡಜೋಲ್ ಮಾತ್ರೆ ನೀಡಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ವಿವರಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸಿ.ರಂಗಧಾಮಯ್ಯ, ತಾಲ್ಲೂಕು ವೈದ್ಯಾಧಿಕಾರಿ ಡಾ.ಚೇತನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಷ್ಮಯಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಪಲ್ಲೇದ್, ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ, ಶ್ರೀನಾಥ್, ಇತರರು ಇದ್ದರು.









