ಮಡಿಕೇರಿ ಡಿ.26 NEWS DESK : ಮಡಿಕೇರಿ ಹಾಗೂ ಕುಶಾಲನಗದಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ಗಳ ನಿಷೇಧಿಸಿ ಹೊರಡಿಸಿರುವ ಆದೇಶ ಸಂಪೂರ್ಣವಾಗಿ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದ್ದು, ತಕ್ಷಣ ಪುನರ್ ಪರಿಶೀಲನೆ ನಡೆಸಬೇಕೆಂದು ಕರ್ನಾಟಕ ಯುವ ರಕ್ಷಣಾ ವೇದಿಕೆ ಮನವಿ ಮಾಡಿದೆ. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಮನವಿ ಸಲ್ಲಿಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯ ಕಾರ್ಯದರ್ಶಿ ಎಂ.ಎಂ.ದಾವೂದ್, ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ಗಳ ನಿಷೇಧದಿಂದ ಜನಸಾಮಾನ್ಯರು ಮತ್ತು ವರ್ತಕರು ಅನುಭವಿಸುವ ತೊಂದರೆಗಳ ಬಗ್ಗೆ ಗಮನ ಸೆಳೆದರು. ಪ್ರವಾಸಿಗರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ರೋಗಿಗಳು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರು ಅಗತ್ಯವಾಗಿದೆ. ಈ ನಿಷೇಧದಿಂದಾಗಿ ಜನ ಸಾಮಾನ್ಯರು ಹಾಗೂ ವರ್ತಕರಿಗೆ ತೊಂದರೆಯಾಗಲಿದೆ. ಆರೋಗ್ಯಕ್ಕೆ ಹಾನಿಕಾರಕವೆಂದು ವೈಜ್ಞಾನಿಕವಾಗಿ ಸಾಬೀತಾಗಿರುವ ತಂಪು ಪಾನೀಯಗಳು ಅದೇ ಪ್ಲಾಸ್ಟಿಕ್ ಬಾಟಲಿನಲ್ಲಿ ನಿರ್ಬಂಧವಿಲ್ಲದೆ ಮಾರಾಟವಾಗುತ್ತಿದೆ. ಇದಕ್ಕೆ ಯಾವುದೇ ಬ್ಯಾನ್ಗಳಿಲ್ಲ. ಆದರೆ, ಮಾನವನ ಜೀವಕ್ಕೆ ಅಗತ್ಯವಾದ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ಗಳನ್ನೇ ನಿಷೇಧಿಸಿರುವುದು ಮಲತಾಯಿ ಧೋರಣೆ ಎಂದರು. ಜಿಲ್ಲೆಯ ನಾಗರಿಕರಾಗಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಪ್ಲಾಸ್ಟಿಕ್ ಬಳಕೆ ನಿಯಂತ್ರಣದ ಉದ್ದೇಶವನ್ನು ಬೆಂಬಲಿಸುತ್ತೇವೆ. ಆದರೆ, ಮಡಿಕೇರಿ ಹಾಗೂ ಕುಶಾಲನಗರ ಭಾಗಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ಗಳ ನಿಷೇಧಕ್ಕೆ ಸಂಬಂಧಿಸಿದ ಇತ್ತೀಚಿನ ಆದೇಶವು ಕಾನೂನು, ತರ್ಕ ಹಾಗೂ ಮಾನವೀಯತೆಯ ಮಾನದಂಡಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಆದೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಅಥವಾ ಪುನರ್ ಪರಿಶೀಲಿಸಬೇಕು, ಎಲ್ಲಾ ಪ್ಲಾಸ್ಟಿಕ್ ಬಾಟಲ್ ಪಾನೀಯಗಳಿಗೆ ಸಮಾನ ಹಾಗೂ ಭೇದಭಾವ ರಹಿತ ನಿಯಮ ಜಾರಿಗೊಳಿಸಬೇಕು, ಸಾರ್ವಜನಿಕರ ಅಭಿಪ್ರಾಯ ಪಡೆದು, ವೈಜ್ಞಾನಿಕ ಮತ್ತು ಕಾನೂನು ಸಲಹೆ ಆಧಾರಿತ ನೀತಿ ರೂಪಿಸಬೇಕು, ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಹಿತಾಸಕ್ತಿ ಎರಡನ್ನೂ ಸಮತೋಲನವಾಗಿ ಕಾಪಾಡಬೇಕು ಎಂದು ಮನವಿ ಮಾಡಿದರು. ಜನಸಾಮಾನ್ಯರು ಮತ್ತು ವರ್ತಕರಿಗೆ ತೊಂದರೆಯಾಗುವ ಈ ನಿರ್ಣಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಮುತ್ತುರಾಜು, ಕಾರ್ಯಾಧ್ಯಕ್ಷ ಮುದ್ದಪ್ಪ, ಗೌರವಾಧ್ಯಕ್ಷ ಪಿ.ಕೆ.ಯಾದವ್, ಉದ್ಯಮಿಗಳಾದ ಸತೀಶ್, ಕವನ್ ಬಿದ್ದಪ್ಪ ಉಪಸ್ಥಿತರಿದ್ದರು. ನಂತರ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಿದರು.













