ಸುಂಟಿಕೊಪ್ಪ ಮಾ.14 : ಸಾರಿಗೆ ಇಲಾಖೆ ವತಿಯಿಂದ ಸುಂಟಿಕೊಪ್ಪದ ಆಟೋ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯ ಬಗ್ಗೆ ಮಾಹಿತಿ ನೀಡಲಾಯಿತು.
ಸುಂಟಿಕೊಪ್ಪದ ಆಟೋ ಚಾಲಕರ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಎಂ.ಮಧುರ ಮಾತನಾಡಿ, ಆಟೋರಿಕ್ಷಾ, ಕ್ಯಾಬ್ ಚಾಲಕರು ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಮೆಟ್ರಿಕ್ ನಂತರ ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಸಿಗುವ ಉಚಿತ ವಿದ್ಯಾನಿಧಿ ಯೋಜನೆ ಮಾಹಿತಿ ನೀಡಿದರು.
ಸರ್ಕಾರ ಚಾಲಕರ ಮಕ್ಕಳಿಗೆ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಚಾಲಕರು ತಮ್ಮ ಡ್ರೈವಿಂಗ್ ಲೈಸನ್ಸ್ ಜೊತೆ ಆಧರ್ ಸಂಖ್ಯೆಯೊಂದಿಗೆ ಆನ್ಲೈನ್ ಮುಖಾಂತರ ಸೇವಾಸಿಂಧು ವೆಬ್ ಪೋರ್ಟಲ್‍ನಲ್ಲಿ ಸುಂಟಿಕೊಪ್ಪ ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಿದರೆ ಆಧಾರ್ ಜೋಡಿತ ನಿಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ ನಗದು ವರ್ಗಾವಣೆ ಆಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭ ವಾಹನ ಚಾಲಕರಿಗೆ ತಮ್ಮ ವಾಹನಕ್ಕೆ ಸಂಬಂಧಿಸಿದ ದಾಖಲಾತಿಗಳ ಬಗ್ಗೆ ಕಿವಿಮಾತು ಹೇಳಿದ ಅವರು, ವಾಹನ ಚಾಲಕರು ಚಾಲನಾ ಅನುಮತಿ ಪತ್ರ ಹಾಗೂ ವಾಹನಗಳ ದಾಖಲಾತಿಗಳನ್ನು ಚಾಲಕರು ಕಾಲಕಾಲಕ್ಕೆ ಸರಿಯಾಗಿ ನವೀಕರಿಸುವುದರೊಂದಿಗೆ ಚಾಲಕರು ಕಡ್ಡಾಯವಾಗಿ ಬ್ಯಾಡ್ಜ್ ಗಳನ್ನು ಧರಿಸುವಂತೆ ಸೂಚಿಸಿದರು.
ಆಟೋ ಚಾಲಕರು ಮಾತನಾಡಿ ದೂರದ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಅನಾರೋಗ್ಯಸ್ಥರನ್ನು ಕೊಂಡೊಯ್ಯಲು ತೆರಳಿದರೆ ಪೊಲೀಸರು ದಂಡ ವಿಧಿಸುತ್ತಿದ್ದು, ಇದಕ್ಕೆ ತಾವುಗಳು ಅÀನುಮತಿ ನೀಡುವಂತೆ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಾರಿಗೆ ಅಧಿಕಾರಿ ಎಸ್.ಎಂ.ಮಧುರ ತಾವುಗಳು ಜಿಲ್ಲಾಧಿಕಾರಿಗಳಿಗೆ ಹಾಗೂ ನಮಗೆ ಮನವಿ ಸಲ್ಲಿಸಿದಲ್ಲಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ಆಟೋ ಚಾಲಕರ ಸಂಘದ ಅಧ್ಯಕ್ಷ ಶರೀಫ್, ಕಾರ್ಯದರ್ಶಿ ರಶೀದ್, ಸಂಘದ ಪದಾಧಿಕಾರಿಗಳು ಹಾಜರಿದ್ದರು.