ನಾಪೋಕ್ಲು ಮಾ.14 : ಹಳೇ ತಾಲೂಕಿನ ಮನೆಯೊಂದರ ಪಕ್ಕದಲ್ಲಿರುವ ಕಾಫಿಗಿಡದಲ್ಲಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರುಗ ತಜ್ಞ ಮೂರ್ನಾಡಿನ ಪ್ರಜ್ವಲ್ ಕುಮಾರ್ ಸುರಕ್ಷಿತವಾಗಿ ಸೆರೆ ಹಿಡಿದು ರಕ್ಷಣೆ ಮಾಡಿದ್ದಾರೆ.
ಹಳೇ ತಾಲೂಕು ನಿವಾಸಿ ಕುಂದೈರೀರ ಸತೀಶ್ ಎಂಬುವವರ ಮನೆಯ ಪಕ್ಕದಲ್ಲಿರುವ ತೋಟದ ಕಾಫಿಗಿಡದ ಮೇಲಿದ್ದ 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಅಸ್ಸಾಂ ಕಾರ್ಮಿಕರು ಕಂಡು ಸತೀಶ್ ಅವರಿಗೆ ತಿಳಿಸಿದ್ದಾರೆ. ಹಾವನ್ನು ವೀಕ್ಷಿಸಿದ ಮನೆಯವರು ಭಯಭೀತರಾಗಿ ಉರಗ ತಜ್ಞ ಪ್ರಜ್ವಲ್ ಅವರಿಗೆ ಮಾಹಿತಿನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪ್ರಜ್ವಲ್ ಹಾಗೂ ಸ್ನೇಹಿತರು ಹರಸಾಹಸದಿಂದ ಕಾಫಿಗಿಡದ ಮೇಲಿದ್ದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು.
ಹಾವನ್ನು ಮಾಕುಟ್ಟ ಅರಣ್ಯಕ್ಕೆ ಬಿಡಲಾಗುವುದೆಂದು ಪ್ರಜ್ವಲ್ ತಿಳಿಸಿದರು. ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿರುವ ಬಗ್ಗೆ ಮಾಹಿತಿ ತಿಳಿದ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದರು.
ಈ ಸಂದರ್ಭ ಪ್ರಜ್ವಲ್ ಸ್ನೇಹಿತರಾದ ಪುನೀತ್, ಶ್ರೇಯಸ್, ಶಮಂತ್, ಭಾರದ್ವಾಜ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
ನಾಪೋಕ್ಲು :ಝಕರಿಯ ನಾಪೋಕ್ಲು