ಕುಶಾಲನಗರ ಮಾ.14 : ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ ಶಿರಂಗಾಲ ಗ್ರಾಮದಲ್ಲಿ ಶ್ರೀ ಉಮಾಮಹೇಶ್ವರ ಸ್ವಾಮಿಯ ಮಹಾ ರಥೋತ್ಸವ ವೈಭವಯುತವಾಗಿ ನಡೆಯಿತು.
ಶ್ರೀ ಉಮಾಮಹೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವದಲ್ಲಿ ನೂರಾರು ಭಕ್ತರು ಭಾಗಿಯಾಗಿ ತೇರನ್ನು ಎಳೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಪುಷ್ಪ ಹಾಗೂ ವಿವಿಧ ಧ್ವಜಗಳಿಂದ ಅಲಂಕೃತ ಗೊಂಡಿದ್ದ ತೇರಿನಲ್ಲಿ ಉಮಾಮಹೇಶ್ವರ ದೇವರ ವಿಗ್ರಹ ಪ್ರತಿಷ್ಠಾಪಿಸಲಾಯಿತು.
ದೇವಾಲಯದ ಅರ್ಚಕ ಸಚ್ಚಿನ್ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಬಳಿಕ ಮಧ್ಯಾಹ್ನ 1.00 ಗಂಟೆ ವೇಳೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಬಾಲಕನ ವೀರಗಾಸೆ ನೃತ್ಯ ಕಲಾ ಪ್ರದರ್ಶನ ರಥೋತ್ಸವಕ್ಕೆ ಮೆರುಗು ನೀಡಿತು. ಮೆರಣಿಗೆಯುದ್ದಕ್ಕೂ ರಥಕ್ಕೆ ಈಡುಗಾಯಿಯೊಂದಿಗೆ ಹೂ, ಬಾಳೆಹಣ್ಣನ್ನು ಎಸೆದು ಭಕ್ತಿ ಮೆರೆದರು. ರಥೋತ್ಸವದಲ್ಲಿ ಹಾಸನ, ಮೈಸೂರು ಜಿಲ್ಲೆಗಳ ಗಡಿಗ್ರಾಮದ ಜನರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ಪಾಲ್ಗೊಂಡಿದ್ದರು.
ರಥೋತ್ಸವವು ಮಂಗಳವಾದ್ಯ ದೊಂದಿಗೆ ಗ್ರಾಮದಲ್ಲಿ ಸಂಚರಿಸಿ ನಂತರ ತೇರು ಊರಿನ ಸಂತೆಮಾಳದ ಬಳಿ ಸಮಾಪನ ಗೊಂಡಿತು. ಹೊಳೆಗುಡಿ ಜಾತ್ರೆ ಎಂದೇ ಪ್ರಸಿದ್ಧಿಯಾಗಿರುವ ಉಮಾ ಮಹೇಶ್ವರ ರಥೋತ್ಸವವು ಉತ್ತರ ಕೊಡಗಿನ ಬಯಲು ಸೀಮೆಯ ಜನರ ಪ್ರಮುಖ ಆಕರ್ಷಣೆಯಾಗಿದೆ.
ಗ್ರಾಮ ದೇವಾಲಯ ಸಮಿತಿ ಅಧ್ಯಕ್ಷ ರುದ್ರಪ್ಪ ಹಾಗೂ ಕಾರ್ಯದರ್ಶಿ ಮಹೇಶ್ ನೇತೃತ್ವದಲ್ಲಿ
ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ರಥೋತ್ಸವದ ಅಂಗವಾಗಿ ಗ್ರಾಮದ ಕೃಷ್ಣಶೆಟ್ಟಿ ಮತ್ತು ಎಸ್.ಎ
ಶ್ರೀನಿವಾಸ್ ಕುಟುಂಬಸ್ಥರು ಅನ್ನದಾನ ನೆರವೇರಿಸಿದರು.
ಸಮಿತಿಯ ಪ್ರಮುಖರಾದ ಎಸ್.ಎಸ್.ಚಂದ್ರಶೇಖರ್, ಬಸವಣ್ಣಯ್ಯ, ಧನು, ರಾಜಣ್ಣ, ಲೋಕೇಶ್ ಮತ್ತಿತರರು ಉತ್ಸವದಲ್ಲಿ ಪಾಲ್ಗೊಂಡಿದ್ದರು.