ಸೋಮವಾರಪೇಟೆ ಮಾ.14 : ಪಟ್ಟಣದ ಶ್ರೀಮುತ್ತಪ್ಪ ಸ್ವಾಮಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.
ಶ್ರೀ ಮುತ್ತಪ್ಪ ಸ್ವಾಮಿ ಹಾಗೂ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಅವರ ನೇತೃತ್ವದಲ್ಲಿ ಗಣಪತಿಹೋಮದೊಂದಿಗೆ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿತು.
ನಂತರ ಅಧ್ಯಕ್ಷ ಎನ್.ಡಿ.ವಿನೋದ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.
ಸಂಜೆ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಕೇರಳದ ಕೊಳಪುರಂ ಮನಹಿಲ್ಲಂ ತಂತ್ರಿಗಳಾದ ಕೃಷ್ಣಕುಮಾರ್ ಅವರ ನೇತೃತ್ವದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ವಿಶೇಷ ಆಶ್ಲೇಷ ಪೂಜೆ ಜರುಗಿದವು.
ನಂತರ ನೂತನವಾಗಿ ನಿರ್ಮಿಸಿರುವ ಅನ್ನದಾನ ಮಂಟಪವನ್ನು ಶಾಸಕ ಅಪ್ಪಚ್ಚುರಂಜನ್ ಅವರು ದೀಪ ಬೆಳಗುವುದರ ಮೂಲಕ ಲೋಕಾರ್ಪಣೆ ಮಾಡಿದರು.
ಈ ಸಂದರ್ಭ ಚೌಡ್ಲು ಗ್ರಾ.ಪಂ ಅಧ್ಯಕ್ಷ ಪಿ.ಎಂ.ಗಣಪತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಲೀಲಾವತಿ ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ಶ್ರೀಮುತ್ತಪ್ಪಸ್ವಾಮಿ ಹಾಗೂ ಅಯ್ಯಪ್ಪಸ್ವಾಮಿ ದೇವಾಲಯದ ಅಧ್ಯಕ್ಷ ಎನ್.ಡಿ.ವಿನೋದ್‍ಕುಮಾರ್ ವಹಿಸಿದ್ದರು.
ಸೋಮವಾರದಂದು ಮಧ್ಯಾಹ್ನ ಉತ್ಸವ ಆರಂಭಗೊಂಡಿತು. ಸಂಜೆ ಶ್ರೀಮುತ್ತಪ್ಪ ದೇವರ ವೆಳ್ಳಾಟಂ ನಡೆಯಿತು. ನಂತರ ಕೇರಳದ ಖ್ಯಾತ ಸಿಂಗಾರಿ ಮೇಳದೊಂದಿಗೆ ಕಳಸದ ಮೆರವಣಿಗೆಯು ದೇವಾಲಯದ ಆವರಣದಿಂದ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿತು.
ಸಂಜೆ ವಿಷ್ಣುಮೂರ್ತಿ ದೇವರ ವೆಳ್ಳಾಟಂ, ಕರಿಂಗುಟ್ಟಿ ದೇವರ ವೆಳ್ಳಾಟಂ, ನಂತರ ಕಂಡಕರ್ಣ ದೇವರ ವೆಳ್ಳಾಟಂ, ಭಗವತಿ ದೇವಿ, ರಕ್ತಚಾಮುಂಡಿ ದೇವಿಯ ವೆಳ್ಳಾಟಂ, ಪೊಟ್ಟನ್ ದೇವರ ವೆಳ್ಳಾಟಂ ನಂತರ ದೇವರ ಕಳಿಕ್ಕಾಪಾಟ್ ನೆರವೇರಿತು.
ಕ್ಷೇತ್ರಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿ ಅನ್ನದಾನ ನಡೆಯಿತು.