ಮಡಿಕೇರಿ ಮಾ.14 : ಮಂಗಳೂರು ವಿಶ್ವ ವಿದ್ಯಾನಿಲಯವು ಪದವಿ ವಿಭಾಗದ ರ‍್ಯಾಂಕ್ ಪಟ್ಟಿ ಪ್ರಕಟಿಸಿದ್ದು, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಬಿ.ಎ (ಎಚ್‌ಆರ್‌ಡಿ) ವಿಭಾಗದ ವಿದ್ಯಾರ್ಥಿ ಬ್ರೈಟನ್ ಮ್ಯಾಥ್ಯೂ 2022 ನೇ ಸಾಲಿನ ಬಿ.ಎ (ಎಚ್‌ಆರ್‌ಡಿ) ಪರೀಕ್ಷೆಗಳಲ್ಲಿ ತೃತೀಯ ರ್ಯಾಂಕ್ ಪಡೆದಿದ್ದಾರೆ.
ಇವರು 6 ಸೆಮಿಸ್ಟರ್‍ಗಳಲ್ಲಿ ಒಟ್ಟು 3500 ಅಂಕಗಳಲ್ಲಿ 2648 ಅಂಕಗಳನ್ನು ಗಳಿಸಿ 75.65 ಅಂಕಗಳೊಂದಿಗೆ ಈ ಸಾಧನೆ ಮಾಡಿದ್ದಾರೆ. ಇವರು ಮಡಿಕೇರಿ ಮಂಗಳಾದೇವಿ ನಗರದ ನಿವಾಸಿಯಾದ ನಿವೃತ್ತ ಯೋಧ ಹಾಗೂ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜಿನ ಪೋಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಮ್ಯಾಥ್ಯೂ ಕೆ.ಪಿ. ಹಾಗೂ ಫಿಲೋಮಿನಾ ಇವರ ಪುತ್ರನಾಗಿದ್ದು, ಪ್ರಸ್ತುತ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂ.ಎ ಇಂಗ್ಲೀಷ್ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಹಾಗೆಯೇ ಕಾಲೇಜಿನ ಎಂ.ಎ ಇಂಗ್ಲೀಷ್ ವಿಭಾಗದ ವಿದ್ಯಾರ್ಥಿಗಳಾದ ಸುಬ್ರಮಣಿ ಸಿ.ಎ ಹಾಗೂ ಕಾವೇರಮ್ಮ ಕೆ.ಜೆ ಇವರುಗಳು ಶೈಕ್ಷಣಿಕ ವರ್ಷ 2020-21 ಮತ್ತು 2021-22 ನೇ ಸಾಲಿನಲ್ಲಿ ನಡೆದ ಸ್ನಾತಕೋತ್ತರ ಇಂಗ್ಲೀಷ್ ಪರೀಕ್ಷೆಯಲ್ಲಿ ತೃತೀಯ ಸೆಮಿಸ್ಟರ್‍ನ ಸಾಹಿತ್ಯ ವಿಮರ್ಶೆ-1 ಹಾಗೂ ಚತುರ್ಥ ಸೆಮಿಸ್ಟರ್‌ನ ಸಾಹಿತ್ಯ ವಿಮರ್ಶ-2 ಎಂಬ ಎರಡು ವಿಷಯಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನಕ್ಕೆ ಭಾಜನರಾಗಿದ್ದಾರೆ.
ಕಾವೇರಮ್ಮ ಕೆ.ಜೆ ಇವರು ವಿರಾಜಪೇಟೆ ತಾಲೂಕಿನ ಕಿರಗೂರು ಗ್ರಾಮದ ಜಯ ಹಾಗೂ ಪಾರ್ವತಿ ಇವರ ಪುತ್ರಿಯಾಗಿದ್ದು, ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೂ ಸಿ.ಎ ಸುಬ್ರಮಣಿ ಇವರು ವಿರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮದ ಸಿ.ಎಂ.ಅಪ್ಪಯ್ಯ ಹಾಗೂ ಸುಶೀಲಾ ಇವರ ಪುತ್ರನಾಗಿದ್ದು, ಪ್ರಸ್ತುತ ಹೆಗ್ಗಳ ಗ್ರಾಮದಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.
ಮಾರ್ಚ್, 15 ರಂದು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ನಡೆಯುವ 41 ನೇ ಘಟಿಕೋತ್ಸವದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್‍ಚಂದ್ ಗೆಹ್ಲೋತ್, ಕುಲಪತಿಗಳಾದ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಹಾಗೂ ಇನ್ನಿತರ ಗಣ್ಯರಿಂದ ಪ್ರಶಸ್ತಿ ಪತ್ರ ಹಾಗೂ ಚಿನ್ನದ ಪದಕ/ ನಗದು ಬಹುಮಾನ ಪಡೆಯಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ.ರಾಘವ ಬಿ. ಅವರು ತಿಳಿಸಿದ್ದಾರೆ.