ಮಡಿಕೇರಿ ಮಾ.16 : ಮುಂಬರುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು, ಕೊಡವರ ಬೇಡಿಕೆಗಳನ್ನೂ ತಮ್ಮ ಪ್ರಣಾಳಿಕೆಯಲ್ಲಿ ಪ್ರಕಟಿಸಬೇಕೆಂದು ಕೊಡವಾಮೆರ ಕೊಂಡಾಟ ಸಂಘಟನೆ ಆಗ್ರಹಿಸಿದೆ.
ಕೊಡಗಿನ ಆದಿ ಮೂಲ ನಿವಾಸಿ ಜನಾಂಗವಾಗಿದ್ದು, ಕೊಡಗಿನಲ್ಲಿ ಸುಮಾರು ಒಂದು ಲಕ್ಷ, ಮೈಸೂರು ಜಿಲ್ಲೆಯಲ್ಲಿ ಸುಮಾರು 25000, ಬೆಂಗಳೂರಿನಲ್ಲಿ ಸುಮಾರು 60,000 ಹಾಗೂ ರಾಜ್ಯದ ಇತರೆಡೆಗಳಲ್ಲಿ ಸರಿಸುಮಾರು 40,000 ಮತದಾರರನ್ನು ಹೊಂದಿರುವ, ಕೊಡವ ಜನಾಂಗಕ್ಕೆ ಇದುವರೆಗೂ ಯಾವುದೇ ರಾಜಕೀಯ ಪಕ್ಷವೂ ಸೂಕ್ತ ಮನ್ನಣೆಯನ್ನು ನೀಡಿಲ್ಲ.
ಮುಂಬರುವ ವಿಧಾನ ಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ನಮ್ಮ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡುವ ರಾಜಕೀಯ ಪಕ್ಷವನ್ನು ಜನಾಂಗ ಬೆಂಬಲಿಸುವ ಯೋಚನೆ ಮಾಡಬೇಕಾಗಿದೆ.
ಈ ನಿಟ್ಟಿನಲ್ಲಿ ಕೊಡವ ಪ್ರಮುಖ ಬೇಡಿಕೆಗಳಾದ ಕೊಡವ ಭಾಷೆಯನ್ನು, ಅಧಿಕೃತ ರಾಜ್ಯಭಾಷೆಯಾಗಿ ಘೋಷಿಸುವುದು, ಕೊಡವರನ್ನ ಆದಿ ಬುಡಕಟ್ಟು ಜನಾಂಗವೆಂದು ಅಧಿಕೃತಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡುವುದು, ಕೊಡವ, ಕಾರೋಣ ಕೂಟ , ಕೈಮಡ, ಐನ್ ಮನೆಗಳನ್ನು ವಿಶೇಷ ಸ್ಮಾರಕಗಳಂತೆ ರಕ್ಷಿಸಲು ಅನುದಾನ, ತಲೆಕಾವೇರಿ, ಇಗ್ಗುತಪ್ಪ ದೇವಾಲಯಗಳನ್ನು ಮುಜರಾಯಿ ಇಲಾಖೆಯ ಕಪಿ ಮುಷ್ಟಿಯಿಂದ ಬಿಡಿಸಿ, ಮೂಲ ತಕ್ಕರಿಗೆ ತಕ್ಕಾಮೆ ನೀಡುವುದು, ದೇವಾಟ್ ಪರಂಬುವಿನಲ್ಲಿ 5 ಏಕರೆ ಪ್ರದೇಶವನ್ನು ಸ್ಮಾರಕ ಮಾಡುವುದು, 260+ ಕೊಡವ ಸ್ವಾತಂತ್ರ ಹೋರಾಟಗಾರರ ನನೆಪಿನಲ್ಲಿ ಮಡಿಕೇರಿಯಲ್ಲಿ ವಿಶೇಷ ಸ್ಮಾರಕ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.
ಭಾರತದ ಪ್ರಥಮ ಜಾನಪದ ಗ್ರಂಥ ಕರ್ತೃ ನಡಿಕೇರಿಯಂಡ ಚಿಣ್ಣಪ್ಪ ಅವರ ಜನ್ಮ ದಿನವನ್ನು ರಾಜ್ಯದ ಅಧಿಕೃತ ಜಾನಪದ ದಿನವಾಗಿ ಆಚರಿಸುವುದು, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡಿಕೇರಿಯಂಡ ಚಿಣ್ಣಪ್ಪ ಸ್ಮಾರಕ ಜಾನಪದ ಕೇಂದ್ರಗಳ ಸ್ಥಾಪನೆ, ನಾಗರ ಹೊಳೆ ರಾಜೀವ್ ಗಾಂಧಿ ಉದ್ಯಾನವನ್ನು ಫಿ.ಮಾ. ಕೊಡಂದೇರ ಕಾರ್ಯಪ್ಪ ರಾಷ್ಟ್ರೀಯ ಉದ್ಯಾನವೆಂದು ಮರು ನಾಮಕರಣ, ಭಾರತ ರಾಷ್ಟ್ರೀಯ ಸೇವೆಯಲ್ಲಿ ಕೊಡವರ ಸೇವೆ ಸಾಧನೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವುದು, ನಿವೃತ್ತ ಯೋಧರ ಕಲ್ಯಾಣಕ್ಕಾಗಿ ಪ್ರತೀ ಬಡ್ಜೆಟ್’ನಲ್ಲಿಯೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು, ಬೆಂಗಳೂರು / ಮೈಸೂರುಗಳಲ್ಲಿ ವಿದ್ಯಾಬ್ಯಾಸ ಮಾಡುವ ಕೊಡವ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಬೇಕು, ಕೊಡವ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಪ್ರತೀ ವರ್ಷ 100ಕೋಟಿ ಅನುದಾನ ಮೀಸಲಿಡುವುದು, ಮೈಸೂರಿನಿಂದ ಕೊಡಗನ್ನು ಸಂಪರ್ಕಿಸುವ ಕುಶಾಲನಗರ ದ್ವಾರಕ್ಕೆ ಮಹಾನ್ ಪರಾಕ್ರಮಿ ಕುಲ್ಲೇಟಿರ ಪೊನ್ನಣ್ಣ, ಆನೆಚೌಕೂರು ದ್ವಾರಕ್ಕೆ ಪಂದ್ಯಂಡ ಬೆಳ್ಯಪ್ಪ ಹೆಬ್ಬಾಗಿಲು ಎಂದು ನಾಮಕರಣ ಮಾಡಿ ಮಹಾ ದ್ವಾರ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.
ಇದುವರೆಗೆ ಕೊಡವರನ್ನ ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಂಡು ಬಂದಿರುವ ರಾಜಕೀಯ ಪಕ್ಷಗಳು, ಈ ಬಾರಿ ಕೊಡವರ ಬೇಡಿಕೆಗೆ ಪೂರಕವಾಗಿ ಸ್ಪಂದಿಸುವ ಭರವಸೆಯನ್ನು ತಮ್ಮ ಪ್ರಣಾಳಿಕೆಯಲ್ಲಿ ಪ್ರಕಟಿಸಬೇಕು ಎಂದು ಸಂಘಟನೆ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದೆ.