ಮಡಿಕೇರಿ ಮಾ.16 : ಮನೆಯಲ್ಲಿ ಕಟ್ಟಿ ಹಾಕಿದ ಸಾಕು ನಾಯಿಗಳನ್ನು ಚಿರತೆಯೊಂದು ಎಳೆದೊಯ್ದು ಭಕ್ಷಿಸುತ್ತಿರುವ ಘಟನೆ ದೇವಸ್ತೂರು ಗ್ರಾಮದಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಗ್ರಾಮದ ಸಾಕು ನಾಯಿಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಿದ್ದವು. ಈ ಬಗ್ಗೆ ಗ್ರಾಮಸ್ಥರಲ್ಲೇ ಚರ್ಚೆ ನಡೆದಿತ್ತು, ಆದರೆ ಬುಧವಾರ ರಾತ್ರಿ ಸ್ಥಳೀಯ ನಿವಾಸಿ ನಂದೀರ ಹರಿ ಚಂಗಪ್ಪ ಎಂಬುವವರ ನಾಯಿಯನ್ನು ಚಿರತೆ ಎಳೆದೊಯ್ದ ಘಟನೆ ನಡೆದಿದೆ. ಕಟ್ಟಿ ಹಾಕಿದ ನಾಯಿ ಕಿರುಚಿಕೊಂಡಾಗ ಹರಿ ಚಂಗಪ್ಪ ಅವರು ನೋಡಲು ಬಂದರು. ಅವರು ಬರುವಷ್ಟರಲ್ಲೇ ಚಿರತೆ ನಾಯಿಯನ್ನು ಎಳೆದೊಯ್ದಿದೆ. ಮನೆಯ ಆವರಣದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಕಂಡು ಬಂದಿದ್ದು, ಸ್ಥಳೀಯರು ಭಯಗೊಂಡಿದ್ದಾರೆ.
ಗ್ರಾಮಸ್ಥರು ಮಾಹಿತಿ ನೀಡಿದ ಹಿನ್ನೆಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಅನಾಹುತಗಳು ಸಂಭವಿಸುವ ಮೊದಲು ಚಿರತೆಯನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದರು.










